ರೈತ ನಾಯಕ ಪುಟ್ಟಣ್ಣಯ್ಯ ನಿಧನಕ್ಕೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Update: 2018-02-19 15:44 GMT

ಬೆಂಗಳೂರು, ಫೆ. 19: ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಮೃತರ ಗೌರವಾರ್ಥ ಸದನವನ್ನು ನಾಳೆಗೆ ಮುಂದೂಡಲಾಯಿತು.

ಸೋಮವಾರ ವಿಧಾನಸಭೆ ಮತ್ತು ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಕೋಳಿವಾಡ ಮತ್ತು ಸಭಾಪತಿ ಶಂಕರಮೂರ್ತಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಮಂಡ್ಯ ಜಿಲ್ಲೆ ಪಾಂಡವಪುರದ ಕ್ಯಾತನಹಳ್ಳಿಯಲ್ಲಿ 1949ರ ಡಿ.23ರಂದು ಜನಿಸಿದ ಪುಟ್ಟಣ್ಣಯ್ಯ ಪದವೀಧರರಾಗಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರ ವಿದ್ಯಾರ್ಥಿ ದೆಸೆಯಲ್ಲಿಯೇ ಬಡವರು ಮತ್ತು ಕೃಷಿ ಕಾರ್ಮಿಕರ ಕಷ್ಟ ಕಾರ್ಪಣ್ಯಗಳನ್ನು ಬಲ್ಲವರಾಗಿದ್ದರು. 1983ರಲ್ಲಿ ಮಂಡ್ಯದ ಎಸ್.ಡಿ.ಜಯರಾಂ ಅವರ ಮಾರ್ಗದರ್ಶನದಲ್ಲಿ ರೈತ ಸಂಘದ ಕಾರ್ಯಕರ್ತರಾಗಿ ಸೇರ್ಪಡೆಗೊಂಡು, ರೈತ ಸಂಘದ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆಂದು ಸ್ಮರಿಸಿದರು.

1994ರಲ್ಲಿ ಮಂಡ್ಯದ ಪಾಂಡವಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣಯ್ಯ ತಮ್ಮ ಹಳ್ಳಿ ಸೊಗಡಿನ ವಾಕ್ಚಾತುರ್ಯದಿಂದ ಸದನದಲ್ಲಿ ಉತ್ತಮ ವಾಕ್ಪಟುವಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ, ರೈತರು, ಕೂಲಿ ಕಾರ್ಮಿಕರ ವಿಷಯದಲ್ಲಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಅಪಾರ ಜ್ಞಾನ ಮತ್ತು ಕಳಕಳಿ ಹೊಂದಿದ್ದರು.

2013ರಲ್ಲಿ ಮೇಲುಕೋಟೆ ಕ್ಷೇತ್ರದ ಆಯ್ಕೆಯಾಗಿದ್ದ ಶ್ರೀಯುತರು, ರೈತರ ಹೆಗ್ಗುರುತಾಗಿ ಸದಾ ಹಸಿರು ಶಾಲು ಧರಿಸುತ್ತಿದ್ದರು. ಅವರ ನಿಧನದಿಂದ ರಾಜ್ಯವು ರೈತರ ಮುಖಂಡರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಪುಟ್ಟಣ್ಣಯ್ಯ ಅವರನ್ನು ಸ್ಮರಿಸಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಸಚಿವರಾದ ಜಯಚಂದ್ರ, ಕೃಷ್ಣ ಬೈರೇಗೌಡ, ಎಚ್.ಕೆ.ಪಾಟೀಲ್, ಖಾದರ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವೈಎಸ್‌ವಿ ದತ್ತ, ಬಿ.ಆರ್. ಪಾಟೀಲ್, ಮೋಯಿದ್ದೀನ್ ಬಾವಾ, ಅಗಲಿದ ನಾಯಕನ ಗುಣಗಾನ ಮಾಡಿದರು. ಅನಂತರ ಉಭಯ ಸದನಗಳಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ನನ್ನ ಮಾರ್ಗದರ್ಶಕರಾಗಿದ್ದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣನವರ ಅವರ ಕನಸಿನಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಜತೆಗೆ ರಾಜ್ಯದಲ್ಲಿ ಪುಟ್ಟಣ್ಣಯ್ಯನವರ ಪುತ್ಥಳಿ ಸ್ಥಾಪಿಸಬೇಕು’
-ಅಶೋಕ್ ಖೇಣಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News