ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಬಂಧನ ಖಂಡಿಸಿ ಪ್ರತಿಭಟನೆ

Update: 2018-02-19 15:48 GMT

ಬೆಂಗಳೂರು, ಫೆ.19: ಪ್ರಾಥಮಿಕ ಹಂತದ ತನಿಖೆ ನಡೆಸದೆ ಬಿಬಿಎಂಪಿ ಅಧಿಕಾರಿಗಳ ಬಂಧನ ಮಾಡಿರುವ ಕ್ರಮ ಖಂಡಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು, ಒಳ ಚರಂಡಿ ದುರಸ್ತಿ ಅಥವಾ ಸ್ವಚ್ಛತಾ ಕೆಲಸಗಳ ಮೇಲುಸ್ತುವಾರಿಯನ್ನು ಪಾಲಿಕೆ ನೌಕರರ ಮೇಲೆ ಹೇರಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್, ವೈದ್ಯಾಧಿಕಾರಿ ಕಲ್ಪನಾ, ಕಾರ್ಯಪಾಲಕ ಇಂಜಿನಿಯರ್ ಮುನಿರೆಡ್ಡಿ ಹಾಗೂ ಆರೋಗ್ಯ ಪರಿವೀಕ್ಷಕ ದೇವರಾಜ್ ಅವರನ್ನು ಏಕಾಏಕಿ ಬಂಧಿಸಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಬಂಧನಕ್ಕೂ ಮೊದಲು ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯದೆ, ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಖಂಡನೀಯ. ಅಧಿಕಾರಿಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ಗಂಭೀರ ಪ್ರಕರಣಗಳಲ್ಲಿ ಪೊಲೀಸರು ಮೊದಲು ಪ್ರಾಥಮಿಕ ಹಂತದ ತನಿಖೆ ನಡೆಸಿ ಸಂಬಂಧ ಪಟ್ಟವರನ್ನು ಬಂಧಿಸಬೇಕು. ಆದರೆ, ತ್ಯಾಜ್ಯ ಸಂಗ್ರಹಣಾ ಗುಂಡಿಗೆ ಇಳಿದು ಕಾರ್ಮಿಕರು ಮೃತಪಟ್ಟ ಹಾಗೂ ಕಸವನಹಳ್ಳಿಯ ಕಟ್ಟಡ ದುರಂತ ಪ್ರಕರಣಗಳಲ್ಲಿ ಹೀಗೆ ನಡೆದಿಲ್ಲ ಎಂದು ಹೇಳಿದರು.

ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ಭಯವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು. ಅವಘಡ ಸಂಭವಿಸಿದಾಗ ಸಮಗ್ರವಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಬೇಕು ಎಂದ ಅವರು, ದಾವಣಗೆರೆ, ಮೈಸೂರು, ಹುಬ್ಬಳ್ಳಿ ಧಾರವಾಡ, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳ ಅಧಿಕಾರಿಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಕೆಲಸ ಸ್ಥಗಿತಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಯಾವುದೇ ಪ್ರಕರಣಗಳಲ್ಲಿ ತನಿಖೆ ನಡೆಸದೆಯೇ ಅಧಿಕಾರಿಗಳನ್ನು ಬಂಧಿಸದಂತೆ ಕ್ರಮಕೈಗೊಳ್ಳುತ್ತೇನೆ
-ರಾಮಲಿಂಗಾರೆಡ್ಡಿ, ಗೃಹ ಸಚಿವ

‘ದುರಂತಗಳು ನಡೆದಾಗ ಆಯುಕ್ತರು ಹಾಗೂ ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯದೆ ಅಧಿಕಾರಿಗಳನ್ನು ಬಂಧನ ಮಾಡಬಾರದು ಎಂದು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’
-ಸಂಪತ್‌ರಾಜ್, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News