ಶಾಸಕ ಹಾರಿಸ್ ಪುತ್ರನ ‘ಫೈಟಿಂಗ್’ ಪ್ರಕರಣ ಇದೇ ಮೊದಲಲ್ಲ!

Update: 2018-02-19 16:47 GMT

ಬೆಂಗಳೂರು, ಫೆ.19: ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಪೊಲೀಸರ ವಶದಲ್ಲಿರುವ ಶಾಸಕ ಎನ್.ಎ. ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಈ ಹಿಂದೆಯೂ ಇಂತಹ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಎನ್ನಲಾಗಿದೆ.

ವಿಲಾಸಿ ಜೀವನ ಶೈಲಿಯ ಮುಹಮ್ಮದ್ ಹಾರಿಸ್ ಹೀಗೆ ಹೊಡೆದಾಟಕ್ಕೆ ಇಳಿದಿರುವುದು ಇದೇ ಮೊದಲಲ್ಲ. ಸದಾ ದುಬಾರಿ ಕಾರುಗಳು, ಹೆಲಿಕಾಪ್ಟರ್, ವಿಲಾಸಿ ವಸ್ತುಗಳ ಹಾಗು ಪ್ರಭಾವೀ ರಾಜಕಾರಣಿಗಳು, ಸಿನಿಮಾ ನಟರೊಂದಿಗೆ ಫೋಟೋಗೆ ಪೋಸ್ ಕೊಡುವ ಈತನ ಹೆಸರು ಈ ಹಿಂದೆಯೂ ಹಲ್ಲೆ ಪ್ರಕರಣಗಳಲ್ಲಿ ಕೇಳಿ ಬಂದಿದೆ. ಆದರೆ ಈ ಬಾರಿ ಮಾತ್ರ ಕಾನೂನಿನ ಕೈಗೆ ಸಿಕ್ಕಿಬಿದ್ದಿದ್ದಾನೆ.

2016ರ ಎಪ್ರಿಲ್ ನಲ್ಲಿ ಬೆಂಗಳೂರಿನ ಬೌರಿಂಗ್ ಸಂಸ್ಥೆಯ ಭದ್ರತಾ ಸಿಬ್ಬಂದಿಯ ಜೊತೆಗೆ ಈತ ವಾಗ್ವಾದಕ್ಕಿಳಿದಿದ್ದ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಆರಂಭವಾದ ಈ ಜಗಳದಲ್ಲಿ ಭದ್ರತಾ ಸಿಬ್ಬಂದಿಗೆ ಎನ್.ಎ.ಹಾರಿಸ್ ಪುತ್ರ ಎಂದು ಹೇಳಿದ್ದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾಗಿ ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು the news minute ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮುಹಮ್ಮದ್ ಹಾರಿಸ್ ನಲಪಾಡ್ ನ ಫೋಟೊ

2016ರ ಆಗಸ್ಟ್ ನಲ್ಲಿ ಕುಡಿದ ಮತ್ತಿನಲ್ಲಿದ್ದ ನಲಪಾಡ್ ಯುವಕನೊಬ್ಬನಿಗೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ದೂರನ್ನು ಹಿಂಪಡೆಯುವಂತೆ ಪೊಲೀಸರು ಯುವಕನೊಂದಿಗೆ ಹೇಳಿದ್ದರು ಎಂದು BANGALORE MIRROR ವರದಿ ಮಾಡಿದೆ.

ಬೌರಿಂಗ್ ಸಂಸ್ಥೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ನಂತರ ಮುಹಮ್ಮದ್ ನಲಪಾಡ್ ನ ಹೆಸರನ್ನು ಹೇಳಿ ಬೇರೆ ಯಾರೋ ಹಲ್ಲೆ ನಡೆಸಿದ್ದಾರೆಂದು ನಂತರ ಆರೋಪವನ್ನು ಕೈಬಿಡಲಾಗಿತ್ತು. ಹಲಸೂರು ಸಮೀಪ ಮುಹಮ್ಮದ್ ನಲಪಾಡ್ ಮತ್ತು ಇತರರು ಫ್ಲೆಕ್ಸ್ ವಿಚಾರದಲ್ಲಿ ಜಗಳ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು BANGALORE MIRROR ವರದಿ ಮಾಡಿದೆ.

2016 ಆಗಸ್ಟ್ 10ರಂದು ರಿಚ್ಮಂಡ್ ಟೌನ್‌ನ ಹಾಕಿ ಕ್ರೀಡಾಂಗಣ ಬಳಿ ‘ಪ್ಲಾನ್ ಬಿ’ ಪಬ್‌ಗೆ ಸ್ನೇಹಿತರ ಜತೆ ನುಗ್ಗಿದ್ದ ಶಾಸಕ ಹಾರಿಸ್‌ನ ಕಿರಿಯ ಮಗ ಉಮರ್, ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಗಾಯಾಳು ಯುವಕ ಅಶೋಕ ನಗರ ಠಾಣೆಗೆ ದೂರು ನೀಡಿದ್ದ ಎನ್ನಲಾಗಿದೆ.

ಇದಲ್ಲದೆ, ಇಂದಿರಾನಗರದ ಪಬ್ ಒಂದರಲ್ಲಿಯೂ ಮುಹಮ್ಮದ್ ನಲಪಾಡ್ ಗಲಾಟೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದರೆ ನಲಪಾಡ್ ನ ಪ್ರಭಾವದಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಫ್ಯಾಶನ್ ಡಿಸೈನರ್ ಒಬ್ಬರ ಪುತ್ರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆಯೂ ಪೊಲೀಸರಿಗೆ ದೂರು ನೀಡಲು ಯತ್ನಿಸಲಾಗಿತ್ತು. ಆದರೆ, ಶಾಸಕ ಹಾರಿಸ್ ಮಧ್ಯಪ್ರವೇಶಿಸಿ ದೂರು ನೀಡುವುದನ್ನು ತಡೆದಿದ್ದರು ಎನ್ನಲಾಗಿದೆ.

ರಾಮಚಂದ್ರ ಗುಹಾ ಟ್ವೀಟ್ ನಿಂದ ಎಚ್ಚೆತ್ತ ರಾಜ್ಯ ಸರಕಾರ:

ಶಾಸಕ ಎನ್.ಎ. ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದದ್ದು ಹಾಗು ಆತನ ಬಂಧಿಸಲು ರಾಜ್ಯ ಸರಕಾರಕ್ಕೆ ಚುರುಕು ಮುಟ್ಟಿಸಿದ್ದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಟ್ವೀಟ್.

ಎನ್.ಎ. ಹಾರಿಸ್ ತನ್ನ ಕ್ಷೇತ್ರದ ಶಾಸಕನಾಗಿದ್ದು, ಅವರ ಪುತ್ರನ ವರ್ತನೆ ಒಪ್ಪಿಕೊಳ್ಳುವಂತದ್ದಲ್ಲ. ತಂದೆ ಹಾಗು ಮಗನ ವಿರುದ್ಧ ಸಿಎಂ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎನ್ನುವ ನಂಬಿಕೆಯಿದೆ ಎಂದು ರಾಮಚಂದ್ರ ಗುಹಾ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥರಿಗೆ ಖಂಡಿತಾ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ತದನಂತರ ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಮುಹಮ್ಮದ್ ನಲಪಾಡ್ ಪೊಲೀಸರ ಮುಂದೆ ಶರಣಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News