ಭಾರತ-ಶ್ರೀಲಂಕಾ-ಬಾಂಗ್ಲಾ ತ್ರಿಕೋನ ಸರಣಿ ಮಾ.6ಕ್ಕೆ

Update: 2018-02-20 19:14 GMT

ಹೊಸದಿಲ್ಲಿ, ಫೆ.20: ಭಾರತ ಹಾಗೂ ಶ್ರೀಲಂಕಾ ನಡುವೆ ತ್ರಿಕೋನ ಟ್ವೆಂಟಿ-20 ಸರಣಿ ಮಾ.6 ರಂದು ಸಿಂಹಳೀಯರ ನಾಡಿನಲ್ಲಿ ಆರಂಭವಾಗಲಿದೆ.

ಸರಣಿಯಲ್ಲಿ ಮೂರನೇ ತಂಡವಾಗಿ ಬಾಂಗ್ಲಾದೇಶ ಸ್ಪರ್ಧಿಸಲಿದೆ. ಈ ಹಿಂದೆ ಮಾ.8ಕ್ಕೆ ನಿಗದಿಯಾಗಿದ್ದ ಸರಣಿಯನ್ನು ಎರಡು ದಿನ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಫೈನಲ್ ಪಂದ್ಯವನ್ನು ರವಿವಾರ ನಿಗದಿಪಡಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.

ಸರಣಿಯ ಎಲ್ಲಾ ಪಂದ್ಯಗಳು ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಶ್ರೀಲಂಕಾ ತಂಡಗಳು ಮಾ.4 ರಂದು ಶ್ರೀಲಂಕಾಕ್ಕೆ ತೆರಳಲಿವೆ. ಸರಣಿಗೆ ಮೊದಲು ಬಾಂಗ್ಲಾದೇಶ ಅಭ್ಯಾಸ ಪಂದ್ಯವನ್ನು ಆಡಲಿದೆ. ಭಾರತ ಯಾವುದೇ ಅಭ್ಯಾಸ ಪಂದ್ಯ ಆಡುವುದಿಲ್ಲ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕ ಪ್ರವಾಸ ಮುಗಿದ ಬಳಿಕ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದೆ.

  ಶ್ರೀಲಂಕಾ 70ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏಳು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಯೋಜಿಸಿದೆ. ಟಿವಿ ಹಾಗೂ ಮಾರುಕಟ್ಟೆ ಹಕ್ಕುಗಳ ಮಾರಾಟದಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕನಿಷ್ಠ 6.5 ಮಿಲಿಯನ್ ಡಾಲರ್ ಆದಾಯ ನಿರೀಕ್ಷಿಸುತ್ತಿದೆ.

ಈ ಹಿಂದೆ 1998ರಲ್ಲಿ ಶ್ರೀಲಂಕಾದ 50ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಭಾರತ, ನ್ಯೂಝಿಲೆಂಡ್ ಒಳಗೊಂಡ ತ್ರಿಕೋನ ಸರಣಿಯನ್ನು ಆಯೋಜಿಸಿತ್ತು. ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 7 ರನ್‌ನಿಂದ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News