ಚುನಾವಣೆಗೆ ಕಪ್ಪುಹಣ ಸಂಗ್ರಹಿಸುವ ಹುನ್ನಾರ: ಎಂ.ಎಫ್.ಸಾಲ್ಡಾನ

Update: 2018-02-21 13:29 GMT

ಬೆಂಗಳೂರು, ಫೆ.21: ಕರ್ನಾಟಕ ಮರಗಳ ಸಂರಕ್ಷಣೆ(ತಿದ್ದುಪಡಿ) ವಿಧೇಯಕ ಕಾಯ್ದೆ 2018 ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ವೃಕ್ಷ ಸಮಿತಿ ಸೇರಿದಂತೆ ರಾಜ್ಯದ ವಿವಿಧ ಪರಿಸರ ಪ್ರೇಮಿಗಳು ಖಂಡಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕದ ನಿವೃತ್ತ ನ್ಯಾಯಾಧೀಶ ಎಂ.ಎಫ್.ಸಾಲ್ಡಾನ, ಕರ್ನಾಟಕ ಮರಗಳ ಸಂರಕ್ಷಣೆ(ತಿದ್ದುಪಡಿ) ವಿಧೇಯಕ ಕಾಯ್ದೆಯಲ್ಲಿ ರೈತರ ಭೂಮಿಯಲ್ಲಿ ಬೆಳೆದಿರುವ 50ಕ್ಕೂ ಹೆಚ್ಚು ಜಾತಿಯ ಮರಗಳನ್ನು ಕಡಿಯುವ ಉದ್ದೇಶದಿಂದ ಕಾಯ್ದೆಯನ್ನು ಮಂಡಿಸಲಾಗಿದೆ. ಈ ಕ್ರಮ ಪ್ರಕೃತಿ ನಾಶದ ಪರಮಾವಧಿ ಎಂದರು.

ಈ ಕಾಯ್ದೆಯಲ್ಲಿ ಯಾವುದೇ ವೈಜ್ಞಾನಿಕ ಅಂಶಗಳನ್ನು ಪರಿಗಣಿಸದೆ ಔಷಧಿ ಹಾಗೂ ಪರಿಸರ ಸ್ನೇಹಿ ಮರಗಳಾಗಿರುವ 50 ಪ್ರಭೇದದ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದ್ದು, ಇದು ಟಿಂಬರ್ ಮಾಫಿಯಾಕ್ಕೆ ಉತ್ತೇಜನ ನೀಡಿ, ಚುನಾವಣೆಗೆ ಕಪ್ಪುಹಣ ಸಂಗ್ರಹಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಲಕ್ಷ್ಮಿತರು ಮರದಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಔಷಧೀಯ ಗುಣ ಹೊಂದಿರುವುದರ ಜತೆಗೆ ಅಂತರ್ಜಲ ಕ್ರೋಡೀಕರಣಕ್ಕೆ ಸಹಕಾರಿಯಾಗಿದೆ. ನುಗ್ಗೆಮರ ಅಪೌಷ್ಟಿಕತೆಗೆ ರಾಮಭಾಣ, ಬಾಗೇಮರ ಸಹ ಔಷಧೀಯ ಗುಣಹೊಂದಿದೆ. ಇನ್ನು ಆಫ್ರಿಕನ್ ಟ್ಯುಲಿಪ್, ಪೆಲ್ಟೋಫಾರಂ, ಆಕಾಶಮಲ್ಲಿಗೆ, ಕ್ಯಾಶಿಯಾ ಮುಂತಾದ ಪ್ರಭೇದಗಳು ತನ್ನದೇ ಆದ ಮಹತ್ವಹೊಂದಿದ್ದು ಹಸಿರುಕರಣದಲ್ಲಿ ಮಹತ್ವದ ಪಾತ್ರವಹಿಸಿವೆ. ಹೀಗಾಗಿ, ಈ ಕಾಯ್ದೆ ಜಾರಿಯಾದಲ್ಲಿ ಕರ್ನಾಟಕ ಮರಗಳ ಸಂರಕ್ಷಣ ಕಾಯ್ದೆ 1976ಕ್ಕೆ ಚ್ಯುತಿ ಉಂಟಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News