ಶಾಸಕರ ಗೈರು ಹಾಜರಿಯಿಂದಾಗಿ 1 ಗಂಟೆ ತಡವಾಗಿ ಆರಂಭವಾದ ಕಲಾಪ

Update: 2018-02-21 13:34 GMT

ಬೆಂಗಳೂರು, ಫೆ.21: ಶಾಸಕರ ಗೈರು ಹಾಜರಿಯಿಂದಾಗಿ ಸದನದ ಮಹತ್ವದ ಸಮಯ ಹಾಳಾಗುತ್ತಿದೆ. ರಾಜ್ಯ ಬಜೆಟ್‌ನ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಹುತೇಕ ಶಾಸಕರಿಗೆ ಆಸಕ್ತಿಯಿಲ್ಲದಂತಾಗಿದೆ.

ಬುಧವಾರ ಬೆಳಗ್ಗೆ 10.30ಕ್ಕೆ ಅಧಿವೇಶನ ಸೇರಲು ಸಮಯ ನಿಗದಿಯಾಗಿತ್ತು. ಆದರೆ, 11.20 ಆದರೂ ವಿಧಾನಸಭೆಯೊಳಗೆ ಸಚಿವರು ಸೇರಿದಂತೆ ಕೇವಲ 16 ಮಂದಿ ಸದಸ್ಯರು ಮಾತ್ರ ಉಪಸ್ಥಿತರಿದ್ದರು. 11.25ಕ್ಕೆ 30 ಸದಸ್ಯರು ಸದನ ಒಳಗೆ ಇರುವುದು ಖಾತ್ರಿಯಾಗುತ್ತಿದ್ದಂತೆ ವಿಧಾನಸಭೆ ಕಲಾಪವನ್ನು ಆರಂಭಿಸಲಾಯಿತು.

ಸದನ ಸೇರುತ್ತಿದ್ದಂತೆ ಪ್ರಶ್ನೋತ್ತರ ಕಲಾಪವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಕೈಗೆತ್ತಿಕೊಂಡರು, ಇಂದಿನ ಪ್ರಶ್ನೋತ್ತರ ಕಲಾಪದಲ್ಲಿ ಒಟ್ಟು 15 ಮಂದಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿತ್ತು. ಆದರೆ, ಈ ಪೈಕಿ ಪ್ರಶ್ನೆ ಕೇಳಬೇಕಿದ್ದ 11 ಮಂದಿ ಸದಸ್ಯರು ಗೈರು ಹಾಜರಾಗಿದ್ದರು.

ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್, ಹೆಬ್ಬಾಳ ಕ್ಷೇತ್ರದ ವೈ.ಎ.ನಾರಾಯಣಸ್ವಾಮಿ, ಹುನಗುಂದ ಕ್ಷೇತ್ರದ ವಿಜಯಾನಂದ ಕಾಶಪ್ಪನವರ್, ತುಮಕೂರು ನಗರ ಕ್ಷೇತ್ರದ ಡಾ.ರಫೀಕ್ ಅಹ್ಮದ್ ಮಾತ್ರ ಕಲಾಪದಲ್ಲಿ ಹಾಜರಿದ್ದು ಪ್ರಶ್ನೋತ್ತರಗಳನ್ನು ಕೇಳಿದರು.

ಈಗಾಗಲೆ ಅಧಿವೇಶನದ ಅವಧಿಯನ್ನು ಫೆ.28ರಿಂದ ಫೆ.23ಕ್ಕೆ ಇಳಿಸಲಾಗಿದೆ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2 ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ಶಾಸಕರು ನಿರಾಸಕ್ತಿ ತೋರುತ್ತಿದ್ದಾರೆ. ಪ್ರತಿದಿನ ಸದನದಲ್ಲಿ ಸದಸ್ಯರ ಹಾಜರಾತಿ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ.

ಅಧಿವೇಶನದಲ್ಲಿ ಬಜೆಟ್‌ಗೆ ಅನುಮೋದನೆ ಪಡೆದುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರಿಗೆ ಇಂದು ಭೋಜನಕೂಟವನ್ನು ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News