ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ: ತನ್ವೀರ್‌ಸೇಠ್
ಬೆಂಗಳೂರು, ಫೆ.21: ರಾಜ್ಯದಲ್ಲಿ 27 ಹೋಬಳಿಗಳನ್ನು ಹೊರತುಪಡಿಸಿ, ಉಳಿದ ಎಲ್ಲೆಡೆ ಸರಕಾರಿ ಪದವಿಪೂರ್ವ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತ್ತು ಅವಶ್ಯಕತೆಗೆ ಅನುಗುಣವಾಗಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಟಿ.ಸೋಮಶೇಖರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದರಿಂದ ಹನ್ನೆರಡನೆ ತರಗತಿಗಳು ಒಂದೇ ಕಡೆ ಇರುವ ರೀತಿ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಭಾವಿಗಳಿಗೆ ಮಾತ್ರ ಕಾಲೇಜುಗಳನ್ನು ಮಂಜೂರು ಮಾಡುತ್ತೀರಾ, ನಮ್ಮಂತಹ ಸಾಮಾನ್ಯ ಶಾಸಕರ ಕ್ಷೇತ್ರಗಳಿಗೂ ಕಾಲೇಜು ಮಂಜೂರು ಮಾಡಿಕೊಡಿ ಎಂದು ಸೋಮಶೇಖರ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ಈ ಸರಕಾರದಲ್ಲಿ ಸೋಮಶೇಖರ್‌ಗಿಂತ ಪ್ರಭಾವಿ ಶಾಸಕರಿದ್ದಾರೆಯೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದಕ್ಕೆ ದನಿಗೂಡಿಸಿದ ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಸಾಮಾನ್ಯ ಮತ್ತು ಪ್ರಭಾವಿ ಶಾಸಕರ ನಡುವಿನ ವ್ಯತ್ಯಾಸವೇನು ಅನ್ನೋದನ್ನು ತಿಳಿಸಬೇಕು ಎಂದು ಸೋಮಶೇಖರ್‌ಗೆ ಕಿಚಾಯಿಸಿದರು.
ಕೆಂಗೇರಿ ಹಾಗೂ ತಾವರೆಕೆರೆ ಹೋಬಳಿಗಳಲ್ಲಿ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಿದ್ದು, ಈ ಹೋಬಳಿಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಂದ ಮಕ್ಕಳ ಸಂಖ್ಯೆ ಮತ್ತು ಕೊಠಡಿಗಳ ಸಂಖ್ಯೆ ಕುರಿತು ಮಾಹಿತಿ ಪಡೆದು ಕಾಲೇಜು ಆರಂಭಿಸಲು ಕ್ರಮವಹಿಸಲಾಗುವುದು ಎಂದು ತನ್ವೀರ್‌ಸೇಠ್ ಹೇಳಿದರು.
ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಕಾಲೇಜುಗಳನ್ನು ಮಂಜೂರು ಮಾಡಲಾಗುತ್ತದೆ. ಕೆಂಗೇರಿ ಹಾಗೂ ತಾವರೆಕೆರೆ ಸಮೀಪದ ದೊಡ್ಡೇರಿಯಲ್ಲಿ ಸರಕಾರಿ ಕಾಲೇಜು ಇದ್ದು ಕೇವಲ 37 ಮಂದಿ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಆದುದರಿಂದ, ಶಾಲೆಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕೆಂಗೇರಿ ಹಾಗೂ ತಾವರೆಕೆರೆಗೆ ಕಾಲೇಜು ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದರು.