ಕಂಠೀರವ ಕ್ರೀಡಾಂಗಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡುತ್ತಿಲ್ಲ: ಯು.ಟಿ.ಖಾದರ್

Update: 2018-02-21 14:09 GMT

ಬೆಂಗಳೂರು, ಫೆ.21: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ನೀಡಲಾಗುತ್ತಿಲ್ಲ. ಹಾಗೊಂದು ವೇಳೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸದಸ್ಯ ಎಂ.ನಾರಾಯಣಸ್ವಾಮಿ ಕೇಳಿದ ಪ್ರಶ್ನಗೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಪರವಾಗಿ ಉತ್ತರಿಸಿದ ಸಚಿವ ಯು.ಟಿ.ಖಾದರ್, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣವನ್ನು ಪ್ರಸ್ತುತ ಸಾಲಿನಲ್ಲಿ ಉನ್ನತೀಕರಿಸಲಾಗಿದ್ದು, ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡುತ್ತಿಲ್ಲ. ಆದರೆ, ಕೋರಮಂಗಲ ಕ್ರೀಡಾಂಗಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಿ, ಅದರಿಂದ ಬಂದ ಆದಾಯವನ್ನು ಅದೇ ಕ್ರೀಡಾಂಗಣದ ಅಭಿವೃದ್ಧಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದರು.

ಒಳಾಂಗಣ ಕ್ರೀಡಾಂಗಣಗಳೂ ಸೇರಿ ಕ್ರೀಡಾಂಗಣಗಳಿಂದ ಬರುವ ಎಲ್ಲ ಆದಾಯವನ್ನು ಆಯಾ ಕ್ರೀಡಾಂಗಣಗಳ ಅಥವಾ ಕ್ರೀಡಾ ಸಮುಚ್ಛಯಗಳ ಸ್ವಚ್ಛತೆ, ಭದ್ರತೆ, ವಿದ್ಯುತ್ ವೆಚ್ಚ ಇತ್ಯಾದಿ ದೈನಂದಿನ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News