×
Ad

ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಎಪ್ರಿಲ್‌ನಲ್ಲಿ ಲೋಕಾರ್ಪಣೆ: ಟಿ.ಬಿ.ಜಯಚಂದ್ರ

Update: 2018-02-21 19:40 IST

ಬೆಂಗಳೂರು, ಫೆ.21: ಕಲುಬುರಗಿಯಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಎಪ್ರಿಲ್ ಅಂತ್ಯದಲ್ಲಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಅಮರನಾಥ್ ಪಾಟೀಲ್ ಕೇಳಿದ ಪ್ರಶ್ನೆಗೆ ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಲಾಡ್ ಪರವಾಗಿ ಉತ್ತರಿಸಿದ ಸಚಿವರು, ಈ ಕೇಂದ್ರಕ್ಕೆ 40 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಹಿಂದೂಸ್ತಾನ್ ಸ್ಟೀಲ್ ಕನ್‌ಸ್ಟ್ರಕ್ಷನ್ ಕಂಪೆನಿಗೆ ಕಟ್ಟಡ ನಿರ್ಮಿಸಲು ವಹಿಸಿಕೊಡಲಾಗಿದೆ ಎಂದು ತಿಳಿಸಿದರು.

ತಾಂತ್ರಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಹಾಗೂ ಕೈಗಾರಿಕೋದ್ಯಮ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದರು.

ಕಾಮಗಾರಿ ಪೂರ್ಣಗೊಂಡ ನಂತರ ಗ್ರಂಥಾಲಯ, ಎಸ್‌ಪಿಟಿ, ಸೋಲಾರ್ ವಾಟರ್ ಹಿಟರ್ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಅಲ್ಲದೆ, ಕಲಬುರಗಿಯಲ್ಲಿ ಮೇ ಅಥವಾ ಜೂನ್ ತಿಂಗಳಲ್ಲಿ ಬೃಹತ್ ಮಟ್ಟದಲ್ಲಿ ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News