ಶಾಲಾ ಕಟ್ಟಡ ದುರಸ್ತಿಗೆ ಕೇಂದ್ರ ಅನುದಾನ ನೀಡುತ್ತಿಲ್ಲ: ಸಚಿವ ತನ್ವೀರ್ ಸೇಠ್
ಬೆಂಗಳೂರು, ಫೆ. 21: ಸರ್ವಶಿಕ್ಷಣ ಅಭಿಯಾನದಡಿ ಶಾಲಾ ಕಟ್ಟಡ ದುರಸ್ತಿಗೆ ಕೇಂದ್ರ ಸರಕಾರ ಅನುದಾನ ನೀಡುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರವೇ ಶಾಲಾ ಕಟ್ಟಡ ದುರಸ್ತಿಗೆ ಅನುದಾನ ಒದಗಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಜೆಡಿಎಸ್ ಸದಸ್ಯ ಸಾ.ರಾ.ಮಹೇಶ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಶಾಲಾ ಕಟ್ಟಡ ದುರಸ್ತಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ 1,630 ಕೋಟಿ ರೂ.ಅನುದಾನ ನೀಡಬೇಕಿತ್ತು. ಆದರೆ, 630 ಕೋಟಿ ರೂ.ಮಾತ್ರ ನೀಡಿದೆ. ಹೀಗಾಗಿ ಖರ್ಚಾಗದೆ ಉಳಿದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬಳಕೆಯಾಗದ 240 ಕೋಟಿ ರೂ. ಮತ್ತು ರಾಜ್ಯ ಸರಕಾರ 220 ಕೋಟಿ ರೂ.ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ಶಾಲಾ ಕಟ್ಟಡ ದುರಸ್ತಿ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 52 ಸಾವಿರ ಶಾಲಾ ಕಟ್ಟಡಗಳಿದ್ದು, ಏಕಕಾಲದಲ್ಲಿ ಎಲ್ಲ ಶಾಲಾ ಕಟ್ಟಡ ದುರಸ್ತಿ ಸಾಧ್ಯವಾಗುವುದಿಲ್ಲ. ಅನುದಾನದ ಲಭ್ಯತೆ ಆಧರಿಸಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ತನ್ವೀರ್ ಸೇಠ್ ಇದೇ ವೇಳೆ ಸದನಕ್ಕೆ ಮಾಹಿತಿ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ರಾಜ್ಯದ 12 ಸಾವಿರ ಶಾಲಾ ಕೊಠಡಿಗಳು ಬಿದ್ದು ಹೋಗುವ ಹಂತದಲ್ಲಿದ್ದು, ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಕಲಿಯಬೇಕಾದ ದುಸ್ಥಿತಿ ಇದೆ. ಹೀಗಾಗಿ ಶಾಲಾ ದುರಸ್ತಿಗಾಗಿ 2 ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ನಿಮ್ಮ ಬದ್ಧತೆ ಪ್ರದರ್ಶಿಸಿ ಎಂದು ಆಗ್ರಹಿಸಿದರು.
‘ಅಪೌಷ್ಟಿಕತೆ ನಿವಾರಣೆಯ ಮಹತ್ವದ ಉದ್ದೇಶಕ್ಕಾಗಿ ಮಾತೃಪೂರ್ಣ ಎಂಬ ನೂತನ ಯೋಜನೆ ಜಾರಿಗೊಳಿಸಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಕೆಲ ನ್ಯೂನತೆಗಳಿವೆ. ಆ ನ್ಯೂನತೆ ಸರಿಪಡಿಸಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’
-ತನ್ವೀರ್ ಸೇಠ್ ಪ್ರಾಥಮಿಕ ಶಿಕ್ಷಣ ಸಚಿವಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ನೀಡುತ್ತಿರುವ ಲ್ಯಾಪ್‌ಟಾಪ್ ಬ್ಯಾಗ್ ಮಾರುಕಟ್ಟೆ ದರ ಕೇವಲ 180 ರೂ.ನಿಂದ 200 ರೂ.ಗಳು ಆದರೆ, 1,500 ರೂ. ಎಂದು ನಮೋದಿಸಲಾಗಿದೆ’
-ಸಾ.ರಾ.ಮಹೇಶ್ ಜೆಡಿಎಸ್ ಶಾಸಕ