ವಿವಿಗಳ ಕುಲಪತಿ ಹುದ್ದೆ ಖಾಲಿ ಬಿಡುವುದಿಲ್ಲ: ಬಸವರಾಜ ರಾಯರೆಡ್ಡಿ

Update: 2018-02-21 15:21 GMT

ಬೆಂಗಳೂರು, ಫೆ.21: ರಾಜ್ಯದ ಯಾವ ವಿಶ್ವವಿದ್ಯಾಲಯಗಳಲ್ಲಿಯೂ ಕುಲಪತಿ ಹುದ್ದೆಗಳನ್ನು ಒಂದು ತಿಂಗಳ ಮಟ್ಟಿಗೂ ಖಾಲಿ ಬಿಡದಂತೆ ಹಾಗೂ ವಿವಿಗಳಲ್ಲಿ ಆಗಿಂದಾಗೆ ಖಾಲಿಯಾಗುವ ಹುದ್ದೆಗಳಿಗೆ ಶೀಘ್ರವೇ ಭರ್ತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ-2017ರಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ವಿಧೇಯಕ-2017ರ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸಂಗೀತ ವಿವಿ, ಸಂಸ್ಕೃತ ವಿವಿ, ಜಾನಪದ ವಿವಿ ಹೀಗೆ ಹತ್ತಾರು ವಿವಿಗಳು ತಮ್ಮದೆ ಆದ ನಿಯಮಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಯಾವ ವಿಶ್ವವಿದ್ಯಾಲಯದಲ್ಲಿ ಏನೇನು ನಡೆಯುತ್ತಿದೆ, ಎಲ್ಲಿ ಸಮಸ್ಯೆಯಾಗುತ್ತಿದೆ ಎಂಬುದರ ಕುರಿತು ಪತ್ತೆ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಹೊರತು ಪಡಿಸಿ, ಎಲ್ಲ ವಿವಿಗಳನ್ನು ಒಂದು ಕಾಯ್ದೆಯಡಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ-2017ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಖಾಲಿಯಾಗಲು 3ತಿಂಗಳು ಇರುವಂತೆ ಹೊಸ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ರಾಜ್ಯ ಸರಕಾರ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಒಂದು ವೇಳೆ ರಾಜ್ಯಪಾಲರು ಆ ಅಭ್ಯರ್ಥಿಯನ್ನು ತಿರಸ್ಕೃತಗೊಳಿಸಿದರೆ, ಆ ಕುರಿತು ನಿಖರವಾದ ಲಿಖಿತ ಉತ್ತರವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು. ಎರಡನೆ ಬಾರಿಗೆ ಕಳುಹಿಸಿದ ಅಭ್ಯರ್ಥಿಗೆ ರಾಜ್ಯಪಾಲರು ಅಂಗೀಕಾರ ಮಾಡಲೇಬೇಕೆಂದು ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದರು.

ಕುಲಪತಿ ಹುದ್ದೆಗೆ ನಿಖರವಾದ ಅರ್ಹತೆಯನ್ನು ಕಾಯ್ದೆಯಲ್ಲಿ ಸೂಚಿಸಲಾಗಿದೆ. ಕನಿಷ್ಠ 20ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರಬೇಕು. ಹತ್ತು ವರ್ಷಗಳ ಕಾಲ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಬೇಕು. ಅಂತಹ ಅಭ್ಯರ್ಥಿ ಮಾತ್ರ ಕುಲಪತಿ ಹುದ್ದೆಗೆ ಆಯ್ಕೆ ಮಾಡಲಾಗುವುದು. ಹಾಗೆಯೆ ಸಿಂಡಿಕೇಟ್ ಸದಸ್ಯರ ಹುದ್ದೆಗೂ ಸ್ನಾತಕೋತ್ತರ ಪದವಿ ಆಗಿರಬೇಕೆಂದು ಹೊಸ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಅವರು ಹೇಳಿದರು.

ಸಚಿವ ಬಸವರಾಜ ರಾಯರೆಡ್ಡಿ ಮಂಡಿಸಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017ನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಶ್ರೀಕಂಠೇಗೌಡ, ಪುಟ್ಟಣ್ಣ, ಗಣೇಶ್ ಕಾರ್ಣಿಕ್, ಐವಾನ್ ಡಿಸೋಜ ಸೇರಿದಂತೆ ಎಲ್ಲ ಸದಸ್ಯರು ಶ್ಲಾಘಿಸಿದರು. ನಂತರ ಸಭಾಪತಿ ವಿಧೇಯಕವನ್ನು ಅನುಮೋದಿಸಿ ಅಂಗೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News