ಭಾರತದ ಹಾಕಿಗೆ ಒಡಿಶಾ ಸರಕಾರದ ಐದು ವರ್ಷಗಳ ಪ್ರಾಯೋಜಕತ್ವ

Update: 2018-02-21 18:32 GMT

ಹೊಸದಿಲ್ಲಿ, ಫೆ.21: ಭಾರತದ ಹಾಕಿಗೆ ಕೊನೆಗೂ ಪ್ರಾಯೋಜಕರು ಸಿಕ್ಕಿದ್ದಾರೆ. ಒಡಿಶಾ ಸರಕಾರ ಐದು ವರ್ಷಗಳ ಕಾಲ ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದೆ.

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ಭಾರತದ ಹಾಕಿಗೆ ಸರಕಾರ ಪ್ರಾಯೋಜಕತ್ವ ನೀಡುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಈ ಸಮಾರಂಭದಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಸದಸ್ಯರುಗಳು, ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್‌ಐಎಚ್) ಮತ್ತು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ, ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತಿತರರ ಗಣ್ಯರು ಭಾಗವಹಿಸಲಿದ್ದಾರೆ.

ಒಡಿಶಾ ಸರಕಾರ ಇದೇ ಸಂದರ್ಭದಲ್ಲಿ ತಂಡದ ಲಾಂಛನ ಮತ್ತು ತಂಡಗಳಿಗೆ ನೀಡಲಾಗುವ ಜೆರ್ಸಿಯನ್ನು ಅನಾವರಣಗೊಳಿಸಲಿದೆ.

  ‘‘ ಹಾಕಿ ಒಡಿಶಾದಲ್ಲಿ ಹೆಚ್ಚು ಜನಪ್ರಿಯ ಆಟವಾಗಿದೆ. ಜನರಿಗೆ ಹಾಕಿ ನೆಚ್ಚಿನ ಆಟವಾಗಿದೆ. ಬುಡಕಟ್ಟು ಜನಾಂಗ ನೆಲೆಸಿರುವ ಪ್ರದೇಶಗಳಲ್ಲೂ ಮಕ್ಕಳು ಹಾಕಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ’’

 ‘‘ ಒಡಿಶಾ ರಾಜ್ಯವು ದೇಶಕ್ಕೆ ಪ್ರತಿಭಾವಂತ ಹಾಕಿ ಆಟಗಾರರನ್ನು ನೀಡಿದೆ.ಸರಕಾರ ಹಾಕಿಯ ಅಭಿವೃದ್ಧಿಗೆ ಗಮನ ನೀಡುವ ಜೊತೆಗೆ ದೇಶಕ್ಕೆ ಹಾಕಿಯ ಮೂಲಕ ಕೊಡುಗೆ ನೀಡಲು ಚಿಂತನೆ ನಡೆಸಿದೆ’’ ಎಂದು ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

ಒಡಿಶಾ ರಾಜ್ಯ ಭಾರತದ ಹಾಕಿಯ ತೊಟ್ಟಿಲು ಎನಿಸಿಕೊಂಡಿದೆ. ಭಾರತದ ಹಾಕಿ ತಂಡದಲ್ಲಿ ಮಿಂಚಿರುವ ದಿಲೀಪ್ ಟಿರ್ಕಿ , ಇಗ್ನೇಸ್ ಟಿರ್ಕಿ ಮತ್ತು ಲಾಝಾರುಸ್ ಬಾರ್ಲಾ ಒಡಿಶಾ ರಾಜ್ಯದವರು. ಇದೀಗ ಭಾರತದ ಹಾಕಿ ತಂಡದಲ್ಲಿರುವ ಬಿರೇಂದ್ರ ಲಕ್ರಾ, ಅಮಿತ್ ರೋಹಿದಾಸ್, ದೀಪ್‌ಸನ್ ಟಿರ್ಕಿ ಮತ್ತು ನಮಿತಾ ಟೊಪ್ಪೊ ಒಡಿಶಾ ರಾಜ್ಯಕ್ಕೆ ಸೇರಿದವರು.

ಒಡಿಶಾ ರಾಜ್ಯ ಹಾಕಿಗೆ ಹಿಂದಿನಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಒಡಿಶಾ ಮೂಲದ ಕಳಿಂಗ ಲ್ಯಾನ್ಸೆರ್ಸ್‌ ತಂಡ ಕಳೆದ ವರ್ಷ ಹಾಕಿ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು.

 ಭಾರತದ ಹಾಕಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿರುವ ಒಡಿಶಾ ಸರಕಾರವನ್ನು ಅಭಿನಂದಿಸಿರುವ ಎಫ್‌ಐಎಚ್ ಮತ್ತು ಐಒಎ ಅಧ್ಯಕ್ಷ ಬಾತ್ರಾ ಅವರು ಒಡಿಶಾದ ರಾಜಧಾನಿ ಭುವನೇಶ್ವರವು ಭಾರತದ ಕ್ರೀಡಾ ರಾಜಧಾನಿಯಾಗಿದೆ ಎಂದು ಹೇಳಿದ್ದಾರೆ.

 ಒಡಿಶಾದಲ್ಲಿ ಅಥ್ಲೀಟ್‌ಗಳ ತರಬೇತಿಗೆ ಅತ್ಯುತ್ತಮ ಕೇಂದ್ರವನ್ನು ತೆರೆಯುವಂತೆ ಸರಕಾರಕ್ಕೆ ಬಾತ್ರಾ ಮನವಿ ಮಾಡಿದ್ದಾರೆ. ನ.28ರಿಂದ ಡಿ.16ರ ತನಕ ಒಡಿಶಾದಲ್ಲಿ ಹಾಕಿ ವಿಶ್ವಕಪ್ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News