ಜಟ್ಟಿಂಗ್, ಸಕ್ಕಿಂಗ್ ಮಿಷನ್‌ನಿಂದಲೆ ಮ್ಯಾನ್‌ಹೋಲ್ ಸ್ವಚ್ಛ : ಕೆ.ಜೆ.ಜಾರ್ಜ್
ಬೆಂಗಳೂರು, ಫೆ.22: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ 1,50,600 ಮ್ಯಾನ್‌ಹೋಲ್‌ಗಳಿವೆ. 118 ಜಟ್ಟಿಂಗ್ ಮತ್ತು ಸಕ್ಕಿಂಗ್ ಮಿಷನ್‌ಗಳಿಂದ ಮ್ಯಾನ್‌ಹೋಲ್‌ನಲ್ಲಿರುವ ಕಸ-ಕಡ್ಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರದಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ದುರಂತ ಸಂಭವಿಸಿದ ಪ್ರಕರಣವನ್ನು ಪ್ರಸ್ತಾಪಿಸಿದ ಸಚಿವರು ಮ್ಯಾನ್‌ಹೋಲ್‌ಗೆ ಇಳಿಯುವ ಒಂದೆರಡು ದಿನಗಳ ಮುನ್ನ ಮನೆಗಳಿಂದ, ಕಟ್ಟಡಗಳಿಂದ ನೀರನ್ನು ನಿಲ್ಲಿಸಬೇಕು. ಗ್ಯಾಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಮುಖಕ್ಕೆ ಮುಖವಾಡ ಧರಿಸಿಯೇ ಇಳಿಯಬೇಕು. ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಗಾಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಲಮಂಡಳಿಯಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಗೊಳಿಸುವುದಕ್ಕಾಗಿಯೇ ತರಬೇತಿ ಪಡೆದ ಸಿಬ್ಬಂದಿಗಳು ಇದ್ದಾರೆ. ಆದರೆ ಖಾಸಗಿ ಕಟ್ಟಡ ಮಾಲಕರು ಕಡಿಮೆ ಹಣಕ್ಕಾಗಿ ಕೂಲಿ ಕಾರ್ಮಿಕರನ್ನು ಇಳಿಸುತ್ತಾರೆ. ದುರಾದುಷ್ಟವಶಾತ್ ಇಂತಹ ಪ್ರಕರಣಗಳು ಸಂಭವಿಸುತ್ತವೆ ಎಂದರು.