×
Ad

ಮಾರ್ಚ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಡಾ.ಎಂ.ವೀರಪ್ಪಮೊಯ್ಲಿ

Update: 2018-02-22 23:01 IST

ಬೆಂಗಳೂರು, ಫೆ.22: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧಪಡಿಸಲಾಗುತ್ತಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮಾರ್ಚ್ ಮೊದಲ ಅಥವಾ ಎರಡನೆ ವಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಎಂ.ವೀರಪ್ಪಮೊಯ್ಲಿ ತಿಳಿಸಿದರು.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಆಯಾ ಜಿಲ್ಲೆಗಳಲ್ಲಿ ಬಿಡುಗಡೆಯಾದ ಬಳಿಕ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದರು.

ರಾಜ್ಯದ ಜನತೆಗೆ ಅನುಕೂಲ ಇರುವ ಹಾಗೂ ರಾಜ್ಯವನ್ನು ಬದಲಾವಣೆಯ ದಿಕ್ಕಿನಲ್ಲಿ ಸಾಗಿಸುವ ಪ್ರಣಾಳಿಕೆ ಇದಾಗಲಿದೆ. ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಂಬಂಧ ಆರು ವಿಭಾಗಗಳಾಗಿ ವಿಂಗಡಿಸಿ ಚರ್ಚಿಸಲಾಗಿದೆ. ಹೈದರಾಬಾದ್-ಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ-ಕರ್ನಾಟಕದ ಬೆಳವಣಿಗೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಹುಬ್ಬಳ್ಳಿ, ಮಂಗಳೂರು, ಮೈಸೂರು, ಚಿತ್ರದುರ್ಗ, ಬೆಂಗಳೂರು ನಗರ ಜಿಲ್ಲೆಯಲ್ಲೂ ಸಭೆ ಮಾಡಿ ಚರ್ಚಿಸಲಾಗಿದೆ. ಪ್ರತಿ ಸಂವಾದದಲ್ಲೂ ಅಕ್ಕ-ಪಕ್ಕದ ತಾಲೂಕು, ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಟೌನ್ ಪ್ಲಾನರ್ಸ್, ಅರ್ಬನ್ ಪ್ಲಾನಿಂಗ್, ಬೆಂಗಳೂರು ನೆರೆ ಹಾವಳಿ ಸಂಬಂಧ ಎರಡು ಸುತ್ತಿನ ಸಭೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ನವ ಕರ್ನಾಟಕ ವಿಶನ್-2025 ಅಡಿ ಚರ್ಚೆಗಳನ್ನು ಮಾಡಲಾಗುತ್ತಿದೆ. 2025ರ ಹೊತ್ತಿಗೆ ರಾಜ್ಯ ಹೇಗಿರಬೇಕು ಎನ್ನುವ ವಿಸ್ತೃತ ಚರ್ಚೆಯನ್ನು ನಡೆಸಲಾಗುತ್ತಿದೆ. ರೈತರ ಸಮಸ್ಯೆ, ಅವರ ಅಭಿವೃದ್ಧಿ ಬಗ್ಗೆ ಕೃಷಿ ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯಲ್ಲಿ ಸಂವಾದ ನಡೆದಿದೆ ಎಂದು ವೀರಪ್ಪಮೊಯ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News