‘ಉರ್ಕೊಬ್ಯಾಡ್ರಿ.. ಸುಮ್ಮನೆ ಇಲ್ಲಿ ಬಾಯಿಬಡ್ಕೋತೀರಿ..’

Update: 2018-02-22 17:58 GMT

ಬೆಂಗಳೂರು, ಫೆ. 22: ‘ನಿಮ್ಮ ಯೋಗ್ಯತೆ, ಉರ್ಕೊಬ್ಯಾಡ್ರಿ..ಬಾಯಿಬಡ್ಕೋತೀರಿ..’ ಎಂಬ ಬಿಜೆಪಿ ಸದಸ್ಯರು ಆಡಿದ ಮಾತುಗಳು ವಿಧಾನಸಭೆಯಲ್ಲಿ ಕೆಲಕಾಲ ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಕ್ಸಮರಕ್ಕೆ ಕಾರಣವಾಯಿತು.

ಗುರುವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ, ‘ನಿಮ್ಮ ಯೋಗ್ಯತೆ ಗೊತ್ತು ಬಿಡ್ರಿ. ಅಂತ್ಯ ಸಂಸ್ಕಾರಕ್ಕೆ ನೀಡಬೇಕಾದ ಹಣ ತಿಥಿ ಮಾಡಿದರೂ ಕೊಡಲಿಲ್ಲ’ ಎಂದು ಆಡಳಿತ ಪಕ್ಷದ ಸದಸ್ಯರನ್ನು ಕೆಣಕಿದರು.

ಇದರಿಂದ ಕೆರಳಿದ ಸಾರಿಗೆ ಸಚಿವ ರೇವಣ್ಣ, ‘ಯೋಗ್ಯತೆ’ ಎಂಬ ಪದ ಬಳಕೆ ಬೇಡ. ನಿಮ್ಮ(ಬಿಜೆಪಿ) ಆಡಳಿತಾವಧಿಯಲ್ಲಿ ಸರಕಾರ ಕೊಟ್ಟಿದ್ದ ಚೆಕ್‌ಬೌನ್ಸ್ ಆಗಿದ್ದವು. ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಕೆಲ ಲೋಪಗಳು ಸಹಜ ಎಂದು ತಿರುಗೇಟು ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ನಿಮ್ಮ ಯೋಗ್ಯತೆಯೂ ಗೊತ್ತು. ‘ಯೋಗ್ಯತೆ’ ಎಂಬುದು ಕೆಟ್ಟ ಪದ. ಅದನ್ನು ಬಳಕೆ ಮಾಡಬೇಡಿ ಎಂದು ತಿರುಗೇಟು ನೀಡಿದರು. ಇದರಿಂದ ಆಕ್ರೋಶಗೊಂಡ ಸಿ.ಟಿ.ರವಿ, ನಿಮ್ಮ ಯೋಗ್ಯತೆ ಜನರಿಗೆ ಗೊತ್ತು. ನನ್ನ ಯೋಗ್ಯತೆ ಏನೆಂದು ಜನರಿಗೆ ಗೊತ್ತಿದೆ ಎಂದು ಪರಸ್ಪರ ಕೆಲ ಕಾಲ ವಾಕ್ಸಮರ ನಡೆಸಿದರು.

ಉರ್ಕೋಬ್ಯಾಡ್ರೀ..:ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕುಟುಂಬಗಳಿಗೆ ನೀಡುವ ತೊಗರಿ ಬೇಳೆ ಅತ್ಯಂತ ಕಳಪೆಯಾಗಿದ್ದು, ಅದು ಬೇಯುವುದಿಲ್ಲ ಎಂದು ತೊಗರಿಬೇಳೆ ಪ್ಯಾಕೇಟ್‌ವೊಂದನ್ನು ವಿಧಾನಸಭೆಯಲ್ಲಿ ಪ್ರದರ್ಶಿಸಿದರು.
ಈ ವೇಳೆ ಎದ್ದುನಿಂತ ಬಿಜೆಪಿ ಸದಸ್ಯ ಜೀವರಾಜ್, ಬಿಪಿಎಲ್ ಕುಟುಂಬಗಳಿಗೆ ಮೊದಲು 3 ಕೆಜಿ ಅಕ್ಕಿ ಕೊಡುತ್ತಿದ್ದ ರಾಜ್ಯ ಸರಕಾರ, ಇದೀಗ ಚುನಾವಣಾ ಹತ್ತಿರ ಬಂದ ಕಾರಣಕ್ಕೆ ಅದನ್ನು ಏಳು ಕೆಜಿಗೆ ಏರಿಕೆ ಮಾಡಿದೆ ಎಂದು ಆಡಳಿತ ಪಕ್ಷದ ಸದಸ್ಯರನ್ನು ಕೆಣಕಿದರು. ಇದಕ್ಕೆ ಸಚಿವ ರೇವಣ್ಣ ತೀವ್ರ ಆಕ್ಷೇಪಿಸಿದರು.

ಇದರಿಂದ ಕೆರಳಿದ ಜೀವರಾಜ್, ‘ಉರ್ಕೋಬ್ಯಾಡ್ರೀ.. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಕ್ಕಿ ಪ್ರಮಾಣ ಹೆಚ್ಚಿಸಿದ್ದೀರಿ. ಈಗ ಸುಮ್ಮನೆ ಇಲ್ಲಿ ಬಾಯಿ ಬಡ್ಕೋತೀರಿ’ ಎಂದು ಉರಿಯುವ ಬೆಂಕಿ ತುಪ್ಪ ಸುರಿದರು. ಹೀಗಾಗಿ ಬಿಜೆಪಿ ಹಾಗೂ ಆಡಳಿತ ಸದಸ್ಯರ ಮಧ್ಯ ಕೋಲಾಹಲವೇ ಸೃಷ್ಟಿಯಾಯಿತು.
ಸಿಎಂ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಘೋಷಿಸಿದ ಅನ್ನಭಾಗ್ಯ ಯೋಜನೆಯಡಿ 30 ಕೆಜಿ ಅಕ್ಕಿ ಘೋಷಣೆ ಮಾಡಿದ್ದರು. ಇದೀಗ ಏಳು ಕೆಜಿಗೆ ಇಳಿಸಿದ್ದಾರೆಂದು ಸಿ.ಟಿ.ರವಿ ಆಡಳಿತ ಪಕ್ಷದ ಸದಸ್ಯರ ವಿರುದ್ಧ ವಾಗ್ಭಾಣ ಪ್ರಯೋಗಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ಸಿನ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ, ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಹಾಕ್ತೀನಿ ಅಂತ ಘೋಷಿಸಿದ್ದರು ಎಲ್ಲಿ ಇನ್ನೂ ಬರಲಿಲ್ಲ ಎಂದು ಪ್ರತಿಯಾಗಿ ಬಾಣಬಿಟ್ಟರು. ಇದರಿಂದ ಸದನದಲ್ಲಿ ಗದ್ದಲ- ಗೊಂದಲದ ವಾತಾವರಣ ಸೃಷ್ಟಿಯಾಯಿತು.

‘ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ನೀಡುವ ತೊಗರಿಬೇಳೆ ಕಳಪೆಯಾಗಿದ್ದು, ಬೇಳೆ ಬೇಯುವುದಿಲ್ಲ ಎಂಬ ಬಗ್ಗೆ ರಾಜ್ಯದಲ್ಲಿ ದೂರುಗಳು ಬಂದಿವೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಶೀಲಿಸಬೇಕು’
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ

‘ನಮ್ಮ ಸರಕಾರ ವಿತರಿಸುವ ತೊಗರಿಬೇಳೆ ಉತ್ತಮ ಗುಣಮಟ್ಟದ್ದಾಗಿದೆ. ಆದರೆ, ವಿಪಕ್ಷ ನಾಯಕರು ಪ್ರದರ್ಶಿಸುತ್ತಿರುವ ತೊಗರಿಬೇಳೆ ಗುಜರಾತಿನಿಂದ ಬಂದಿರಬೇಕು. ಹೀಗಾಗಿ ಬೇಯುತ್ತಿಲ್ಲ’
-ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News