ಮತದಾನದ ಅವಧಿ ಹೆಚ್ಚಳ: ವಿ.ಶಂಕರ್
ಬೆಂಗಳೂರು, ಫೆ.22: ರಾಜ್ಯ ವಿಧಾನಸಭಾ ಚುನಾವಣೆ-2018ರ ಮತದಾನ ಪ್ರಕ್ರಿಯೆ ಅವಧಿ 1 ಗಂಟೆ ಕಾಲ ಹೆಚ್ಚಳ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದರು.
ಗುರುವಾರ ನಗರದ ಕೆಜಿ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ಲಾಂಛನವನ್ನು ಇಂದು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮತದಾನದ ಅವಧಿ 1 ಗಂಟೆ ಕಾಲ ಹೆಚ್ಚಳ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆಗರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದರು.
ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತ ಚಲಾಯಿಸಿದವರಿಗೆ ತಾವು ಅಪೇಕ್ಷಿಸಿದ ವ್ಯಕ್ತಿಗೆ ಮತದಾನ ಮಾಡಿದ್ದೇವೆಯೇ ಎಂದು ಪರೀಕ್ಷಿಸಿಕೊಳ್ಳಲು ಆಗುತ್ತಿರಲಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ವಿವಿ ಪ್ಯಾಟ್ ವ್ಯವಸ್ಥೆಯಿದ್ದು, ಮತದಾರರು ಚಲಾಯಿಸುವ ಅಭ್ಯರ್ಥಿಯ ಚಿತ್ರ ಕೆಲವು ಸೆಕೆಂಡುಗಳು ಮತಯಂತ್ರದಲ್ಲಿ ಕಾಣಿಸಲಿವೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುವ ಕಾರಣ ಮತದಾನದ ಅವಧಿಯನ್ನು 1 ಗಂಟೆ ಹೆಚ್ಚಿಸಲಾಗಿದೆ ಎಂದರು.
ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಯಾವುದೇ ಲೋಪವಿಲ್ಲದೇ ನಡೆಸಲು ಅಗತ್ಯವಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಮತದಾರರ ಸಂಖ್ಯೆ 29,80,187 ಹಾಗೂ 1700 ಸ್ಥಳಗಳಲ್ಲಿ 27,77 ಮತಗಟ್ಟೆಗಳಲ್ಲಿ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವರ್ಷ ಒಟ್ಟು ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 1,56,000 ಅರ್ಜಿಗಳು ಸ್ವೀಕೃತಿಯಾಗಿದ್ದು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಬಂದಿರುವ ಅರ್ಜಿಗಳು ಮಾತ್ರ ಬಾಕಿ ಇವೆ. ಅಂತಿಮ ಹಂತದ ಮತದಾರರ ಪಟ್ಟಿ ಸಿದ್ಧವಾದ ನಂತರವು ಕೈಬಿಟ್ಟು ಹೋದವರನ್ನು ನಾಮಪತ್ರ ಸಲ್ಲಿಸುವ ಕಡೆಯ ದಿನದವರೆಗೂ ನೋಂದಣಿ ಮಾಡಿಕೊಳ್ಳಲಿದ್ದು, ಅಂತಹವರ ಹೆಸರನ್ನು ಪೂರಕ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರ್ಚನಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಸೇರಿ ಪ್ರಮುಖರಿದ್ದರು.