ರಸ್ತೆ ಅಪಘಾತ: ಯುವಕ ಮೃತ್ಯು
Update: 2018-02-22 23:48 IST
ಬೆಂಗಳೂರು, ಫೆ.22: ಜೆಸಿಬಿ ವಾಹನಕ್ಕೆ ಕ್ಯಾಂಟರ್ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಯಾದಗಿರಿ ಜಿಲ್ಲೆಯ ನಾಗರಾಜು(22) ಮೃತಪಟ್ಟ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ 10 ಗಂಟೆ ಸಂದರ್ಭದಲ್ಲಿ ಪೀಣ್ಯ ಸಂಚಾರಿ ವ್ಯಾಪ್ತಿಯ ಮೇಲ್ಸೇತುವೆ ಮೇಲೆ ಜೆಸಿಬಿ ವಾಹನ ಹೋಗುತ್ತಿತ್ತು. ಈ ವೇಳೆ ಅತಿವೇಗವಾಗಿ ಬಂದ ಕ್ಯಾಂಟರ್ ಜೆಸಿಬಿಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕನ ಪಕ್ಕ ಕುಳಿತಿದ್ದ ನಾಗರಾಜು ಗಂಭೀರ ಗಾಯಗೊಂಡರು. ತಕ್ಷಣ ಈತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೀಣ್ಯ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.