ವಿಜಯ್ ಹಝಾರೆ ಟ್ರೋಫಿ: ಆಂಧ್ರ ಪ್ರದೇಶ, ಸೌರಾಷ್ಟ್ರ ಸೆಮಿ ಫೈನಲ್ ಗೆ

Update: 2018-02-22 18:43 GMT

ಹೊಸದಿಲ್ಲಿ, ಫೆ.22: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ಆಂಧ್ರಪ್ರದೇಶ ಹಾಗೂ ಸೌರಾಷ್ಟ್ರ ತಂಡಗಳು ಸೆಮಿ ಫೈನಲ್‌ಗೆ ಪ್ರವೇಶಿಸಿವೆ.

ಇಲ್ಲಿ ಗುರುವಾರ ನಡೆದ 4ನೇ ಕ್ವಾರ್ಟರ್ ಫೈನಲ್‌ನಲ್ಲಿ ಆಂಧ್ರದ ಮಧ್ಯಮ ವೇಗದ ಬೌಲರ್ ಶಿವ ಕುಮಾರ್(4-29) ಹಾಗೂ ಎಡಗೈ ಸ್ಪಿನ್ನರ್ ಭಾರ್ಗವ್ ಭಟ್(3-28) ದಾಳಿಗೆ ದಿಕ್ಕಾಪಾಲಾದ ದಿಲ್ಲಿ ದಾಂಡಿಗರು 32.1 ಓವರ್‌ಗಳಲ್ಲಿ ಕೇವಲ 111 ರನ್‌ಗೆ ಆಲೌಟಾದರು.

  ಗೆಲ್ಲಲು ಸುಲಭ ಸವಾಲು ಪಡೆದ ಆಂಧ್ರಪ್ರದೇಶ 4 ವಿಕೆಟ್ ನಷ್ಟಕ್ಕೆ 28.4 ಓವರ್‌ಗಳಲ್ಲಿ 112 ರನ್ ಗಳಿಸಿತು. ರಿಕಿ ಭುಯ್(36,38 ಎಸೆತ, 5 ಬೌಂಡರಿ),ಅಶ್ವಿನ್ ಹೆಬ್ಬಾರ್(38,66 ಎಸೆತ, 4 ಬೌಂಡರಿ) ಹಾಗೂ ಬಿ.ಸುಮಂತ್(ಔಟಾಗದೆ 25) ತಂಡದ ಗೆಲುವಿಗೆ ನೆರವಾದರು.

ಇದಕ್ಕೆ ಮೊದಲು ಟಾಸ್ ಜಯಿಸಿದ ಆಂಧ್ರ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ದಿಲ್ಲಿಯ ಯಾವೊಬ್ಬ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರಂಭಿಕ ಆಟಗಾರ ಉನ್ಮುಕ್ತ್ ಚಂದ್(4) ಶಿವಕುಮಾರ್ ಬೌಲಿಂಗ್‌ಗೆ ಕ್ಲೀನ್‌ಬೌಲ್ಡಾದರು. ಹಿರಿಯ ಆಟಗಾರ ಗೌತಮ್ ಗಂಭೀರ್(8) ಶಿವಕುಮಾರ್ ಬೌಲಿಂಗ್‌ನಲ್ಲಿ ಸುಮಂತ್‌ಗೆ ಸುಲಭ ಕ್ಯಾಚ್ ನೀಡಿದರು.

ಯುವ ಆಟಗಾರ ಹಿತೇನ್ ದಲಾಲ್(11) ಬೇಗನೆ ಔಟಾದಾಗ ದಿಲ್ಲಿಯ ಸ್ಕೋರ್ 9 ಓವರ್‌ಗಳಲ್ಲಿ 3 ವಿಕೆಟ್‌ಗೆ 33.

ನಿತೀಶ್ ರಾಣಾ(2) ಮಧ್ಯಮ ವೇಗದ ಬೌಲರ್ ಬಿ.ಅಯ್ಯಪ್ಪ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ರಿಷಬ್ ಪಂತ್(38) ಹಾಗೂ ಧುೃವ್ ಶೋರೆ(21) 5ನೇ ವಿಕೆಟ್‌ಗೆ 36 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಭಾರ್ಗವ್ ಭಟ್ ಬೇರ್ಪಡಿಸಿದರು. ರಿಷಬ್ 29.2ನೇ ಓವರ್‌ನಲ್ಲಿ ಶಿವಕುಮಾರ್‌ಗೆ ಔಟಾದರು. ರಿಷಬ್ ಔಟಾಗುವುದರೊಂದಿಗೆ ದಿಲ್ಲಿಯ ಹೋರಾಟ ಅಂತ್ಯಗೊಂಡಿತು.

<ಸೌರಾಷ್ಟ್ರಕ್ಕೆ 3 ವಿಕೆಟ್ ಜಯ:  ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಸೌರಾಷ್ಟ್ರ ತಂಡ ಬರೋಡಾ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡ 50 ಓವರ್‌ಗಳಲ್ಲಿ8 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿತು. ಸೊಯೆಬ್ ಟೈ(ಔಟಾಗದೆ 72) ಹಾಗೂ ಕ್ರುನಾಲ್ ಪಾಂಡ್ಯ(61) ಅರ್ಧಶತಕದ ಕೊಡುಗೆ ನೀಡಿದರು.ಚಿರಾಗ್ ಜಾನಿ(4-35) ಯಶಸ್ವಿ ಬೌಲರ್ ಎನಿಸಿಕೊಂಡರು.

ಗೆಲ್ಲಲು 248 ರನ್ ಗುರಿ ಪಡೆದ ಸೌರಾಷ್ಟ್ರ ತಂಡ 48.4 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 251 ರನ್ ಗಳಿಸಿತು. ಆರಂಭಿಕ ಆಟಗಾರ ಅವಿ ಬಾರೊಟ್(82,105 ಎಸೆತ, 8 ಬೌಂಡರಿ), ಅರ್ಪಿತ್ ವಾಸ್ವಾಡ(ಔಟಾಗದೆ 45, 43 ಎಸೆತ, 5 ಬೌಂಡರಿ), ನಾಯಕ ಚೇತೇಶ್ವರ ಪೂಜಾರ(40) ಹಾಗೂ ಚಿರಾಗ್ ಜಾನಿ(25) ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

ಬರೋಡಾದ ಪರ ಅತೀತ್ ಶೇಟ್(3-38)ಯಶಸ್ವಿ ಬೌಲರ್ ಎನಿಸಿಕೊಂಡರು. ಮೊದಲ ಸೆಮಿಫೈನಲ್‌ನಲ್ಲಿ ಕರ್ನಾಟಕ- ಮಹಾರಾಷ್ಟ್ರ ಹಾಗೂ ಎರಡನೇ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ-ಆಂಧ್ರ ತಂಡಗಳು ಸೆಣಸಾಡಲಿವೆ.

►ಸಂಕ್ಷಿಪ್ತ ಸ್ಕೋರ್

►ದಿಲ್ಲಿ: 32.1 ಓವರ್‌ಗಳಲ್ಲಿ 111 ರನ್‌ಗೆ ಆಲೌಟ್

(ರಿಷಬ್ ಪಂತ್ 38, ಶಿವಕುಮಾರ್ 4-29, ಭಾರ್ಗವ್ ಭಟ್ 3-28)

►ಆಂಧ್ರಪ್ರದೇಶ: 28.4 ಓವರ್‌ಗಳಲ್ಲಿ 112/4

(ರಿಕಿ ಭುಯ್ 36, ಅಶ್ವಿನ್ ಹೆಬ್ಬಾರ್ 38, ಬಿ. ಸುಮಂತ್ 25)

................................................................................

►ಬರೋಡ: 50 ಓವರ್‌ಗಳಲ್ಲಿ 247/8

 (ಸೊಯೆಬ್ ಟೈ ಔಟಾಗದೆ 72, ಕುೃನಾಲ್ ಪಾಂಡ್ಯ 61, ಆದಿತ್ಯ ವಾಘೋರೆ 37, ಚಿರಾಗ್ ಜಾನಿ 4-35, ಪಾರೆಕ್ ಮಾಂಕಡ್ 2-29, ಚೇತನ್ ಸಕಾರಿಯ 2-73)

►ಸೌರಾಷ್ಟ್ರ: 48.4 ಓವರ್‌ಗಳಲ್ಲಿ 251/7

(ಅವಿ ಬಾರೊಟ್ 82,ಅರ್ಪಿತ್ ವಸವಾಡ ಔಟಾಗದೆ 45, ಚೇತೇಶ್ವರ ಪೂಜಾರ 40, ಅತೀತ್ ಶೇಟ್ 3-36)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News