ಬರೀ ಕಿವಿಗಷ್ಟೇ ಮಜಾ!

Update: 2018-02-22 18:48 GMT

ಮಾನ್ಯರೇ,

ಕಿವಿಗೆ ಮಜಾ ಕೊಡುವ ಘೋಷಣೆಗಳಾದ ‘‘ಅಚ್ಛೆ ದಿನ್’’, ‘‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’’, ‘‘ಬೇಟಿ ಬಚಾವ್ ಬೇಟಿ ಪಡಾವ್’’, ‘‘ನಾ ಖಾವುಂಗಾ ನಾ ಖಾನೆ ದೂಂಗಾ’’ ಇವು ಬರೀ ಪ್ರಚಾರ ಪಡೆಯುವ ವಾಕ್ಯಗಳಾಗಿವೆ ಎಂಬುವುದು ಕೇಂದ್ರದ ಬಿಜೆಪಿ ಸರಕಾರ ಸಾಬೀತು ಮಾಡಿದೆ. ದೇಶದೆಲ್ಲೆಡೆ ಈ ವಾಕ್ಯಗಳ ತದ್ವಿರುದ್ಧವೇ ನಡೆಯುತ್ತಿರುವ ಘಟನಾವಳಿಗಳು ಈ ಹತಾಶೆಗೆ ಕಾರಣವಾಗಿವೆ.

 ನೋಟ್ ರದ್ದತಿ ನಂತರ ಕೇಂದ್ರವು ಪಾರರ್ದಶಕ ಬ್ಯಾಂಕಿಂಗ್ ವ್ಯವಸ್ಥೆಯ ನೆಪದಲ್ಲಿ ಡಿಜಿಟಲ್(ನಗದು ರಹಿತ) ಕ್ಯಾಶ್‌ಲೆಸ್ ವ್ಯವಹಾರಕ್ಕೆ ಹೆಚ್ಚು ಒತ್ತು ಕೊಟ್ಟಿತು. ಆದರೆ ದೇಶದ ಎರಡನೇ ದೊಡ್ಡ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ನಡೆದ ಬಹುಕೋಟಿ ಹಗರಣವು ಜನ ಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಆಭರಣ ವ್ಯಾಪಾರಿ ನೀರವ್ ಮೋದಿ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ಲೂಟಿ ಮಾಡಿ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದಾನೆ. ಆದರೆ ಅದೇ ದೇಶದ ಅನ್ನದಾತ ತನ್ನ ಒಂದಿಷ್ಟು ಸಾಲ ಮರುಪಾವತಿಸಲಾಗದ ಚಿಂತೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೋಟಿ ಕೋಟಿ ವಂಚಿಸುವ ದೊಡ್ಡ ಕುಳಗಳನ್ನು ಏನೂ ಮಾಡಲಾಗದ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ಕಂಪೆನಿಗಳು ಬಡರೈತನ ವಿರುದ್ಧ ದರ್ಪ ತೋರಿಸಿ ಹಿಂಸೆ ಕೊಟ್ಟು ಅವನನ್ನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸುತ್ತವೆ. ಒಂದು ಬಾಂ್ಯಕಿನಿಂದ ಸಾಲ ಪಡೆಯಲು ಸಾಮಾನ್ಯ ಜನತೆ ಪಡಬೇಕಾದ ಬವಣೆಯ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಅದೇ ಬ್ಯಾಂಕ್‌ಗಳು ವಂಚಕ ಪ್ರಭಾವಿ ವ್ಯಕ್ತಿಗಳಿಗೆ ಸುಲಭವಾಗಿ ದೊಡ್ಡ ಮೊತ್ತದ ಸಾಲ ಮಂಜೂರು ಮಾಡುತ್ತವೆೆ. ಈ ದೊಡ್ಡ ಬ್ಯಾಂಕಿಂಗ್ ಹಗರಣದ ಕುರಿತು ಪ್ರಧಾನಿ ಮಾತನಾಡಬೇಕು ಎಂದು ಜನತೆ ಬಯಸುತ್ತಿದ್ದಾರೆ. ಆದರೆ ಸಾರ್ವಜನಿಕರಪ್ರಶ್ನೆಗಳಿಗೆ ಸರಕಾರ ಉತ್ತರಿಸುತ್ತಿಲ್ಲ. ಕೇಂದ್ರ ಸರಕಾರದ ಇನ್ನೊಂದು ವಿಶೇಷತೆಯೇನೆಂದರೆ ಪ್ರಶ್ನೆಗೆ ಪ್ರಶ್ನೆಯೇ ಉತ್ತರ. ವಿಚಿತ್ರವೆಂದರೆ ಯಾವಾಗ ದೇಶದ ಜನತೆ ‘ಮನ್ ಕಿ ಬಾತ್’ ಕೇಳಬೇಕೆಂದು ಬಯಸುತ್ತಾರೋ, ಆಗ ಪ್ರಧಾನಿ ಮೌನ ವಹಿಸುತ್ತಾರೆ. ನೊಂದಿರುವ ಜನತೆಯ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

Similar News