ಗಲಭೆ ಸೃಷ್ಟಿಸುವುದಕ್ಕಾಗಿ ಅಮಿತ್ ಶಾ ರಾಜ್ಯ ಪ್ರವಾಸ: ರಾಮಲಿಂಗಾರೆಡ್ಡಿ
ಬೆಂಗಳೂರು, ಫೆ.23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿ ಜನರ ನಡುವೆ ದ್ವೇಷ ಬಿತ್ತುವ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿಂದು ಲಾಲ್‌ಬಾಗ್‌ನ ಗಾಜಿನ ಮನೆ ಬಳಿ ಹಾಪ್‌ಕಾಮ್ಸ್ ಆಯೋಜಿಸಿದ್ದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಮಾರಾಟ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ರಾಜ್ಯದಲ್ಲಿ ಪುಂಡಾಟಿಕೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಲ್ಲಿ ಅಮಿತ್ ಶಾ ಅವರ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳನ್ನು ಹೆಚ್ಚಿಸಲು ಕೆಲವರು ಸಂಚು ಹೂಡುತ್ತಿದ್ದಾರೆ. ಅದಲ್ಲದೆ, ಗಲಭೆಗಳು ನಡೆಯುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ನಾಯಕರಿಗೆ ಸೂಚಿಸಿರಬಹುದು. ಈ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲವು ದಿನಗಳ ಹಿಂದೆಯೆ ವಿಡಿಯೋ ಒಂದರಲ್ಲಿ ಹೇಳಿದ್ದಾರೆ. ಹೀಗಾಗಿ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವುದು ಗಲಭೆ ಸೃಷ್ಟಿಸುವುದಕ್ಕಾಗಿಯೆ ಎಂಬ ಅನುಮಾನ ಕಾಡುತ್ತಿದೆ ಎಂದು ತಿಳಿಸಿದರು.
ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಪ್ರಕರಣದಲ್ಲಿ ನಾವು ಪಕ್ಷಾತೀತವಾಗಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಆದರೆ, ರಾಜ್ಯದ ಬಿಜೆಪಿ ನಾಯಕರು ನಡೆಸಿರುವ ಪುಂಡಾಟಿಕೆ ಬಗ್ಗೆ ಇದುವರೆಗೂ ಆ ಪಕ್ಷದ ನಾಯಕರು ಎಲ್ಲಿಯೂ ಖಂಡಿಸಿಲ್ಲ. ತಪ್ಪು ಯಾರೇ ಮಾಡಿದರೂ ಖಂಡಿಸಬೇಕೆ ಹೊರತು, ಒಂದು ಪಕ್ಷದ ತಪ್ಪುಗಳನ್ನೇ ಪದೇ ಪದೇ ಟೀಕೆ ಮಾಡುವುದು ಸರಿಯಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯದಲ್ಲಿ ಸುರಕ್ಷತೆಯ ವಾತಾವರಣ ಇದೆ. ಆದರೆ, ರಾಜಕೀಯ ಲಾಭಕ್ಕಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳುವುದು ಸರಿಯಲ್ಲ. ಬಿಜೆಪಿ ನಾಯಕರು ಈ ಕುರಿತು ನೇರ ಚರ್ಚೆಗೆ ಬರಲಿ. ಅವರಿಗೆ ತಕ್ಕ ಉತ್ತರ ನೀಡಲು ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಸಿದ್ಧವಿದೆ ಎಂದು ಅವರು ಸವಾಲು ಹಾಕಿದರು.