×
Ad

ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ: ಸಿಬಿಐ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ

Update: 2018-02-23 18:32 IST

ಬೆಂಗಳೂರು, ಫೆ.23: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದ್ದು, ರಾಜ್ಯದ 7 ವಿಭಾಗಗಳಲ್ಲಿ ತರಾತುರಿಯಲ್ಲಿ 36 ಕೋಟಿ ರೂ.ವೆಚ್ಚದಲ್ಲಿ ಬೋರ್‌ವೆಲ್ ಕೊರೆಸಲು ಒಂದೇ ದಿನದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಆದೇಶಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದರು.

ಶುಕ್ರವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವ್ಯವಹಾರ ಸಂಬಂಧ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಂಜನೇಯ ಅವರ ಹೊಳಲ್ಕೆರೆ ಕ್ಷೇತ್ರವೊಂದರಲ್ಲೇ ಒಂದೇ ದಿನ 1800 ಗಂಗಾ ಕಲ್ಯಾಣ ಬೋರ್‌ವೆಲ್ ಕೊರೆಸಲು ಆದೇಶ ನೀಡಿದ್ದು, ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಒಂದೇ ಕ್ಷೇತ್ರದಲ್ಲಿ 1,800 ಗಂಗಾ ಕಲ್ಯಾಣ ಬೋರ್‌ವೆಲ್ ತೆಗೆಯುವುದು ಅಂತರ್ಜಲ ವರದಿಯಂತೆ ಕಾನೂನಿಗೆ ವಿರುದ್ಧ ಮತ್ತು 1,800 ಬೋರ್‌ವೆಲ್ ಏಕಕಾಲಕ್ಕೆ ಕೊರೆಯುವುದು ಅಸಾಧ್ಯವಾದ ಕೆಲಸ ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ತೆಗೆಯಲಾಗಿದೆ ಎಂದು ನಮೂದಿಸಿ ಬಿಲ್ ಪಾವತಿ ಮಾಡಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಆಂಜನೇಯ ಅವರ ಒಂದೇ ಕ್ಷೇತ್ರದಲ್ಲಿ 1,800 ಗಂಗಾ ಕಲ್ಯಾಣ ಬೋರ್‌ವೆಲ್‌ಗಳಿಗೆ 18 ಕೋಟಿ ಪೋಲು ಮಾಡಲಾಗಿದೆ. ಬೆರಳಣಿಕೆಯಷ್ಟು ಬೋರ್‌ವೆಲ್ ಕೊರೆಯಲಾಗಿದ್ದು, ಬಾಕಿ ಹಣವನ್ನು ಸಂಪೂರ್ಣವಾಗಿ ನುಂಗಲಾಗಿದೆ ಎಂದು ಆರೋಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಒತ್ತಡ ತಂದು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಹೊಳಲ್ಕೆರೆಗೆ ಒಂದೇ ದಿನದಲ್ಲಿ ವರ್ಗಾವಣೆ ಮಾಡಲಾಗಿದೆ. ಅದೂ ಅಲ್ಲದೆ, ಗಂಗಾ ಕಲ್ಯಾಣ ಬೋರ್‌ವೆಲ್ ಕಾರ್ಯಾದೇಶ ಎಲ್ಲವನ್ನೂ 2018ರ ಜನವರಿ 1ರಂದೇ ಮಾಡಲಾಗಿದೆ ಎಂದು ಶೋಭಾ ವಿವರಿಸಿದರು.

15 ಬೋರ್‌ವೆಲ್ ಕಂಪೆನಿಗಳಿಗೆ 1,200 ಗಂಗಾ ಕಲ್ಯಾಣ ಬೋರ್‌ವೆಲ್ ತೆಗೆಯಲು ಆದೇಶ ಹೊರಡಿಸಲಾಗಿದ್ದು, ಟೆಂಡರ್ ಕರೆಯುವ ಸಂದರ್ಭದಲ್ಲಿ ಕೆಟಿಟಿಪಿ ಕಾಯ್ದೆ ಸಂಪೂರ್ಣ ಉಲ್ಲಂಘಿಸಲಾಗಿದೆ ಎಂದ ಅವರು, ಬಡವರಿಗೆ ಸಿಗಬೇಕಾದ ಗಂಗಾ ಕಲ್ಯಾಣ ಯೋಜನೆಯ ಬೋರ್‌ವೆಲ್‌ಗಳನ್ನು ಕಂಪೆನಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಬೋರ್‌ವೆಲ್ ತೆಗೆಯದೇ ಹಣ ಪಡೆದಿರುವುದು ಮಂತ್ರಿಗಳ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎಂದು ಹೇಳಿದರು.

ಸಿಎಂಗೆ ಸವಾಲು: ಕೇಂದ್ರ ಸರಕಾರ ಶೇ.90ರಷ್ಟು ಕಮಿಷನ್ ಸರಕಾರವೆಂದು ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.

ನಿನ್ನೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರ ಕಮಿಷನ್ ಎಂದು ಹೇಳಿದ್ದಾರೆ. ಆದರೆ, ಅವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಸಿದ್ದರಾಮಯ್ಯ ಸರಕಾರ 10 ಪರ್ಸೆಂಟ್ ಕಮೀಷನ್ ಸರಕಾರ ಎಂದು ಹೇಳಿದ ನಂತರ, ಮೈಮೇಲೆ ಹುಳ ಬಿಟ್ಟುಕೊಂಡಂತೆ ಆ ಪಕ್ಷದ ನಾಯಕರು ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ, ಭಾರತಕ್ಕೆ ವಿಶ್ವದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಬೋರವೆಲ್ ಹಗಣರದ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವ ಆಂಜನೇಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಶೋಭಾ ಕರಂದ್ಲಾಜೆ ಆಗ್ರಹಿಸಿದರು..

ಅಂಬೇಡ್ಕರ್ ಹೆಸರಿನಲ್ಲಿಯೇ ಅವ್ಯವಹಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಶೇಕಡ 100ರಷ್ಟು ಭ್ರಷ್ಟಾಚಾರ ನಡೆಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿಯೇ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವ್ಯವಹಾರ ನಡೆಸಿದ್ದಾರೆ.
-ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಶೋಭಾ ಆರೋಪದಲ್ಲಿ ಹುರಳಿಲ್ಲ;ಯಾವುದೇ ತನಿಖೆಗೆ ಸಿದ್ಧ: ಸಚಿವ ಆಂಜನೇಯ
ಶೋಭಾ ಕರಂದ್ಲಾಜೆ, ನನ್ನ ವಿರುದ್ಧ ಮಾಡಿರುವ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಯಾವುದೇ ಹಗರಣ ನಡೆದಿಲ್ಲ. ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಸಲಾಗಿದೆ .ಶೋಭಾ ಕರಂದ್ಲಾಜೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ. ತನ್ನ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆಂಜನೇಯ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News