‘ಬಿಜೆಪಿಯವರದ್ದು ಭ್ರಷ್ಟಾಚಾರದ ಗಂಗೋತ್ರಿ’: ಬಿಜೆಪಿ-ಕಾಂಗ್ರೆಸ್ ಜಟಾಪಟಿ

Update: 2018-02-23 13:27 GMT

ಬೆಂಗಳೂರು, ಫೆ. 23: ‘ಉದ್ಯಮಿಗಳ ಕೋಟಿ-ಕೋಟಿ ರೂ.ಸಾಲಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೋಟ್ಯಂತರ ರೂ.ನೆರವು ನೀಡುವ ಕೇಂದ್ರ ಸರಕಾರ, ರೈತರ ಸಾಲಮನಾಕ್ಕೆ ಹಣವಿಲ್ಲ ಎಂಬ ನೆಪ ಹೇಳುತ್ತಿದೆ’ ಎಂಬ ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣರ ಆರೋಪ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಶುಕ್ರವಾರ ವಿಧಾನಸಭೆಯಲ್ಲಿ ರಾಜಣ್ಣರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದವು. ಈ ಗದ್ದಲದ ಮಧ್ಯೆ ಧನವಿನಿಯೋಗ ವಿಧೇಯಕ ಸೇರಿದಂತೆ ಲೇಖಾನುದಾನಕ್ಕೆ ಧ್ವನಿಮತದ ಅಂಗೀಕಾರ ನೀಡಲಾಯಿತು.

ಆಯವ್ಯಯದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ, ಸಾಲಮನ್ನಾ ಭರವಸೆ ನೀಡಿರಲಿಲ್ಲ. ಆದರೂ, ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮೂಲಕ ನೀಡಿದ್ದ 8,165ಕೋಟಿ ರೂ.ರೈತರ ಸಾಲಮನ್ನಾ ಮಾಡಿದ್ದು, ಇದರಿಂದ 22ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ಅನುಕೂಲವಾಗಿದೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜಗದೀಶ್ ಶೆಟ್ಟರ್, ‘ನೀವು ಸಾಲಮನ್ನಾ ಮಾಡಿದ್ದೀರಿ, ನಾವು ಅಧಿಕಾರಕ್ಕೆ ಬಂದು ಅದನ್ನು ತೀರಿಸುತ್ತೇವೆ. ಆದರೆ, ಉತ್ತರ ಪ್ರದೇಶದ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಎನ್.ರಾಜಣ್ಣ, ಉತ್ತರ ಪ್ರದೇಶ, ಹರಿಯಾಣದಲ್ಲಿ ರೈತರು ಸಾಲಮನ್ನಾ ಬಗ್ಗೆ ಬಿಜೆಪಿ ಸದಸ್ಯರು ಹೇಳುತ್ತಾರೆ. ಆದರೆ, ಅಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲಮನ್ನಾ ಮಾಡಲಾಗಿದೆ. ರಾಜ್ಯ ಸರಕಾರ ಎಲ್ಲ ವರ್ಗದ ರೈತರ ಸಾಲಮನ್ನಾ ಮಾಡಿದೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದು ಪ್ರದರ್ಶಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ಹೇರಿದ್ದರೂ, ಕೇಂದ್ರ ಈ ಬಗ್ಗೆ ಯಾವುದೇ ಕ್ರಮ ವಹಿಸಲಿಲ್ಲ. ಆದರೆ, ಶ್ರೀಮಂತರ ಉದ್ಯಮಿಗಳ ಸಾಲ ಮರು ವಸೂಲಿಯಾಗದೆ ಅನುತ್ಪಾದಕ ಆಸ್ತಿ(ಎನ್‌ಪಿಎ) ಹೆಚ್ಚಾಗಿರುವುದರಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆರ್ಥಿಕ ಪುನಶ್ಚೇತನ ನೀಡಲು ಕೇಂದ್ರ 2008ರ ವರೆಗೆ 1.18ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ನೀಡಲಾಗಿತ್ತು. 2017ರಲ್ಲಿ 2.11ಲಕ್ಷ ಕೋಟಿ ರೂ.ಅನುದಾನವನ್ನು ಬಜೆಟ್‌ನಿಂದ ಬ್ಯಾಂಕುಗಳಿಗೆ ನೀಡಲಾಗಿದೆ. ಈ ಹಣ ಉದ್ಯಮಿ ನೀರವ್ ಮೋದಿ ತೆಗೆದುಕೊಂಡ 11ಸಾವಿರ ಕೋಟಿ ರೂ., ವಿಜಯ್ ಮಲ್ಯರ 9 ಸಾವಿರ ಕೋಟಿ ರೂ.ಸಾಲಕ್ಕೆ ಹೊಂದಾಣಿಕೆಯಾಗುತ್ತದೆ ಎಂದು ಟೀಕಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಸಿ.ಟಿ.ರವಿ, ಕಾಗೇರಿ, ಜೀವರಾಜ್, ನೀರವ್‌ಮೋದಿ, ಮಲ್ಯಗೆ ಸಾಲ ಕೊಟ್ಟಿದ್ದು ಕಾಂಗ್ರೆಸ್. ನಿಮ್ಮ ಪಾಪವನ್ನು ತೊಳೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಇದರಿಂದ ಸದನದಲ್ಲಿ ಕೆಲಕಾಲ ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆದು ತೀವ್ರ ಗದ್ದಲ-ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ರಾಜಣ್ಣ ಮಾತಿಗೆ ನಿಂತಾಗ ನಮಗೂ(ಬಿಜೆಪಿ) ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಈ ವೇಳೆ ಮಧ್ಯ ಪವೇಶಿಸಿದ ಸಿದ್ದರಾಮಯ್ಯ, ರಾಜಣ್ಣ ಅವರಿಗೆ ಮಾತನಾಡಲು ಅವಕಾಶ ಕೊಟ್ಟು ನಾನು ಕುಳಿತಿದ್ದೇನೆ. ಅವರಿಗೆ ಮಾತನಾಡಲು ಬಿಡಿ. ನಿಮ್ಮಂತೆ ಅವರೂ ಶಾಸಕರು. ಜನರಿಂದ ಮತ ಪಡೆದು ಆಯ್ಕೆಯಾಗಿ ಬಂದಿದ್ದಾರೆಂದು ಸಿಎಂ ರಾಜಣ್ಣ ಬೆಂಬಲಕ್ಕೆ ನಿಂತರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸುವ ಮೂಲಕ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ಸರಕಾರದಲ್ಲಿ ಸದನದ ಹೊರಗೂ-ಒಳಗೂ ಗೂಂಡಾಗಿರಿ ನಡೆಯುತ್ತಿದೆ. ಇದು ದುರಂಹಕಾರಿ ಸರಕಾರ ಎಂದು ಛೇಡಿಸಿದರು.

‘ಬಿಜೆಪಿಯವರು ಕೂಗುಮಾರಿಗಳು. ಉತ್ತರ ನೀಡಲು ಸಿದ್ಧನಿದ್ದರೂ ನಿಮಗೆ ಅದು ಬೇಕಿಲ್ಲ. ನಿಮ್ಮದು 90 ಪರ್ಸೆಂಟ್ ಕಮಿಷನ್ ಸರಕಾರ. ನಿಮ್ಮ ಪಕ್ಷದ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿದ್ದು, ಬೀಗತನ ಮಾಡಲಿಕ್ಕೋ’ ಎಂದು ಸಿದ್ದರಾಮಯ್ಯ ವಾಗ್ಬಾಣ ಬಿಟ್ಟರು.
ಗದ್ದಲ-ಕೋಲಾಹಲ ಮಿತಿ ಮೀರಿದ ಹಿನ್ನೆಲೆಯಲ್ಲಿ ಈ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇಖಾನುದಾನಕ್ಕೆ ಅನುಮೋದನೆ ಕೋರಿದರು. ಸ್ಪೀಕರ್ ಕೋಳಿವಾಡ ಅವರು, ಧ್ವನಿಮತದ ಮೂಲಕ ಲೇಖಾನುದಾನಕ್ಕೆ ಒಪ್ಪಿಗೆ ದೊರಕಿಸಿಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರ ರಕ್ಷಕ. ಆಡಳಿತಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ಇನ್ನೂ ಲೋಕಪಾಲ್ ನೇಮಕ ಮಾಡಲಿಲ್ಲ. ಬಿಜೆಪಿಯವರದ್ದು ಭ್ರಷ್ಟಾಚಾರದ ಗಂಗೋತ್ರಿ. ರಾಜ್ಯ ಸರಕಾರದ ಬಗ್ಗೆ ಟೀಕೆ ಮಾಡುವ ಯಾವುದೇ ನೈತಿಕತೆ ಬಿಜೆಪಿಗೆ ಇಲ್ಲ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News