ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಉತ್ತಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆ. 23: ಕರ್ನಾಟಕ ರಾಜ್ಯ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ರಾಜ್ಯದ ಜಿಡಿಪಿ ಬೆಳವಣಿಗೆಯೂ ಉತ್ತಮವಾಗಿದ್ದು, ಶೇ.8.5ರಷ್ಟಿದೆ. ಕರ್ನಾಟಕ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಮೊದಲನೆ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ನೀರಾವರಿಗೆ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಿದ್ದೇವೆ. ಆರನೆ ವೇತನ ಆಯೋಗದ ಶಿಫಾರಸಿನ ಅನ್ವಯ ಸರಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಿಸುತ್ತಿದ್ದೇವೆ. ಇದಕ್ಕಾಗಿ 10,508 ಕೋಟಿ ರೂ.ಹೊರೆಯಾಗಲಿದೆ. ಇದು ಎಪ್ರಿಲ್ ಒಂದರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದರು.
ಕೃಷಿ, ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಕಲ್ಯಾಣ, ಇಂಧನ ಇಲಾಖೆಗೆ ಯಾವುದೇ ರೀತಿಯಲ್ಲಿ ಅನುದಾನ ಕಡಿತ ಮಾಡಿಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.
ರಾಜ್ಯದ ಜಿಡಿಪಿ ಬೆಳವಣಿಗೆ 2013-14ರಲ್ಲಿ ಶೇ.10.05, 2014-15ರಲ್ಲಿ ಶೇ.6.7, 2015-16ರಲ್ಲಿ ಶೇ.8.2, 2016-17ರಲ್ಲಿ ಶೇ.7.5 ಹಾಗೂ 2017-18ನೆ ಸಾಲಿನಲ್ಲಿ ಶೇ.8.5ರಷ್ಟಿದೆ. ಒಟ್ಟಾರೆ ಐದು ವರ್ಷದ ಜಿಡಿಪಿ ಬೆಳವಣಿಗೆ ಶೇ. 8.3ರಷ್ಟಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.
ವೇತನ ಆಯೋಗದ ಶಿಫಾರಸು ಜಾರಿ ಮತ್ತು ರೈತರ ಸಾಲಮನ್ನಾ ಮಾಡಿದರೂ ಜಿಡಿಪಿ ಬೆಳವಣಿಗೆಯನ್ನು ಕಾಪಾಡಿಕೊಂಡಿದ್ದೇವೆ. ಇದು ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಗಿಂತ ಹೆಚ್ಚು. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಪ್ರಗತಿಯೇ ಇರಲಿಲ್ಲ ಎಂದು ಟೀಕಿಸಿದರು.
ನಮ್ಮ ಸರಕಾರ ಆರ್ಥಿಕ ಶಿಸ್ತು ಕಾಪಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದರೆ ಸಾಲದ ಪ್ರಮಾಣ ರಾಜ್ಯದಲ್ಲಿ ಕಡಿಮೆ ಇದೆ. ವಿತ್ತೀಯ ಕೊರತೆ ಆರು ಬಜೆಟ್‌ಗಳಲ್ಲೂ ಶೇ.3ರ ಒಳಗಿದೆ. ಇನ್ನು ಸಾಲದ ಪ್ರಮಾಣವೂ ಶೇ.25ರ ಒಳಗಡೆಯೇ ಇದೆ. ಕೇಂದ್ರ ಸರಕಾರ ಎಷ್ಟು ಸಾಲ ಮಾಡಿದೆ. ದೇಶದ ಜಿಡಿಪಿ ಬೆಳವಣಿಗೆ ಎಷ್ಟು ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲ. ಕೇಂದ್ರ ಸರಕಾರ 2017-18ರಲ್ಲಿ ಶೇ.50.1ರಷ್ಟು ಸಾಲ ಮಾಡಿದೆ ಎಂದು ಆರೋಪಿಸಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ನೀರವ್ ಮೋದಿ 11 ಸಾವಿರ ಕೋಟಿ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯ 9ಸಾವಿರ ಕೋಟಿ ರೂ.ದೋಚಿ ಹೋಗಿದ್ದಾರೆ. ಇದಕ್ಕೆ ಪ್ರಧಾನಿ ಮೋದಿಯವರ ಕುಮ್ಮಕ್ಕು ಕಾರಣ. ಭ್ರಷ್ಟಾಚಾರಕ್ಕೆ ಅವರೇ ಅವಕಾಶ ಕೊಟ್ಟಿರುವುದು. ಮೋದಿ ಭ್ರಷ್ಟಾಚಾರದ ಪೋಷಕರು ಎಂದು ವಾಗ್ದಾಳಿ ನಡೆಸಿದರು.