11 ದಿನಗಳಲ್ಲಿ 43 ಗಂಟೆ ನಡೆದ ವಿಧಾನಸಭೆ ಕಲಾಪ
ಬೆಂಗಳೂರು, ಫೆ.23: 14ನೆ ವಿಧಾನಸಭೆಯ 16ನೆ ಅಧಿವೇಶನವು ಫೆ.5 ರಿಂದ 9ರವರೆಗೆ ಮತ್ತು ಫೆ.16 ರಿಂದ 23ರವರೆಗೆ ಒಟ್ಟು 11 ದಿನಗಳ ಕಾಲ ನಡೆದಿದ್ದು, ಒಟ್ಟಾರೆ 43 ಗಂಟೆ 34 ನಿಮಿಷಗಳ ಕಾಲ ಕಾರ್ಯಕಲಾಪಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಶಿವಶಂಕರರೆಡ್ಡಿ ಪ್ರಕಟಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಕಾರ್ಯಕಲಾಪಗಳ ವಿವರಣೆ ನೀಡಿದ ಅವರು, ಫೆ.5ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ವಂದನಾ ನಿರ್ಣಯದ ಪ್ರಸ್ತಾವದ ಮೇಲೆ 5 ಗಂಟೆ 9 ನಿಮಿಷಗಳ ಕಾಲ ಚರ್ಚೆಯಾಗಿದ್ದು 2 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಫೆ.22ರಂದು ಮುಖ್ಯಮಂತ್ರಿ ಚರ್ಚೆಗೆ ಉತ್ತರಿಸಿದ ನಂತರ ವಂದನಾ ನಿರ್ಣಯದ ಪ್ರಸ್ತಾವನೆಯು ಅಂಗೀಕೃತವಾಗಿದೆ ಎಂದರು.
ಫೆ.16ರಂದು ಮುಖ್ಯಮಂತ್ರಿ 2018-19ನೆ ಸಾಲಿನ ಆಯವ್ಯಯ ಅಂದಾಜುಗಳನ್ನು ಸದನದಲ್ಲಿ ಮಂಡಿಸಿದರು. ಆಯವ್ಯಯದ ಅಂದಾಜುಗಳ ಮೇಲೆ 8 ಗಂಟೆ 11 ನಿಮಿಷಗಳ ಕಾಲ ಚರ್ಚೆಯಾಗಿದ್ದು, 10 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಫೆ.23ರಂದು ಮುಖ್ಯಮಂತ್ರಿ, ಚರ್ಚೆಗೆ ಉತ್ತರವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯವರು ಮಂಡಿಸಿದ 2017-18ನೆ ಸಾಲಿನ ಪೂರಕ ಅಂದಾಜುಗಳ 3ನೆ ಮತ್ತು ಅಂತಿಮ ಕಂತನ್ನು ಫೆ.23ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು. ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನ ಹೊಂದಿದ ವಿಧಾನಸಭೆಯ ಹಾಲಿ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ, ಮಾಜಿ ಸ್ಪೀಕರ್ ಬಿ.ಜಿ.ಬಣಕಾರ್, ಮಾಜಿ ಶಾಸಕರಾದ ನಾಗಪ್ಪ, ಮುಖ್ತಾರುನ್ನೀಸಾ ಬೇಗಂ, ಆರ್.ನಾರಾಯಣಪ್ಪ, ಕುಮಾರಗೌಡ ಪಾಟೀಲ್, ಪ್ರಹ್ಲಾದ್ ರೆಮಾನಿ, ಯು.ಎಂ.ಮಾದಪ್ಪ ಮತ್ತು ಎಸ್.ಪಿ.ಗಂಗಾಧರಪ್ಪರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ.
ಸದನಕ್ಕೆ ಒಪ್ಪಿಸಿರುವ ವರದಿಗಳು: ಖಾಸಗಿ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ 18 ಮತ್ತು 19ನೆ ವರದಿ, ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ 133ನೇ ವರದಿ, ಹಕ್ಕುಬಾಧ್ಯತೆಗಳ ಸಮಿತಿಯ 10, 11 ಮತ್ತು 12ನೆ ವರದಿ, ಸರಕಾರಿ ಭರವಸೆಗಳ ಸಮಿತಿಯ 11 ಮತ್ತು 12ನೆ ವರದಿ, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ 11ನೆ ವರದಿ.
ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 33ನೆ ವರದಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 25 ಮತ್ತು 26ನೆ ವರದಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 9ನೆ ವರದಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 10, 11, 12 ಮತ್ತು 13ನೆ ವರದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ 33ನೆ ವರದಿ ಹಾಗೂ ಅರ್ಜಿಗಳ ಸಮಿತಿಯ 26ನೆ ವರದಿಯನ್ನು ಸದನಕ್ಕೆ ಒಪ್ಪಿಸಲಾಗಿದೆ.
ರಾಜ್ಯ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 60ರ ಮೇರೆಗೆ ಒಟ್ಟು 9 ನಿಲುವಳಿ ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 8 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದೆ ಹಾಗೂ 1 ಸೂಚನೆಯನ್ನು ತಿರಸ್ಕರಿಸಲಾಗಿದೆ. ನಿಯಮ 69ರಲ್ಲಿ 6 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ನಿಯಮ 60 ರಿಂದ ನಿಯಮ 69ಕ್ಕೆ ಪರಿವರ್ತಿಸಲಾದ 8 ಸೂಚನೆಗಳು ಸೇರಿದಂತೆ ಒಟ್ಟು 14 ಸೂಚನೆಗಳ ಪೈಕಿ 5 ಸೂಚನೆಗಳನ್ನು ಚರ್ಚಿಸಲಾಗಿದ್ದು, 1 ಸೂಚನೆಯು ತಿರಸ್ಕರಿಸಲಾಗಿದೆ.
ಶೂನ್ಯ ವೇಳೆಯಿಂದ ಒಟ್ಟು 11 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 4ನ್ನು ಸದನದಲ್ಲಿ ಚರ್ಚಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 1691 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಲು ತೀರ್ಮಾನಿಸಲಾಗಿದ್ದ 189 ಪ್ರಶ್ನೆಗಳ ಪೈಕಿ 135 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1392 ಪ್ರಶ್ನೆಗಳ ಪೈಕಿ 761 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. 28 ಪ್ರಶ್ನೆಗಳ ಸೂಚನಾ ಪತ್ರಗಳು ತಿರಸ್ಕೃತಗೊಂಡಿವೆ. ಹಾಗೂ 91 ಪ್ರಶ್ನೆಗಳ ಸೂಚನಾ ಪತ್ರಗಳು ಹೆಚ್ಚುವರಿಯಾಗಿವೆ.
ನಿಯಮ 73ರ ಮೇರೆಗೆ ಒಟ್ಟು 140 ಗಮನ ಸೆಳೆಯುವ ಸೂಚನಾ ಪತ್ರಗಳನ್ನು ಸ್ವೀಕರಿಸಿದ್ದು, ಈ ಪೈಕಿ 86 ಸೂಚನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಿದ್ದು, 10 ಸೂಚನೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದೆ. ನಿಯಮ 351ರಡಿಯಲ್ಲಿ ಒಟ್ಟು 90 ಸೂಚನೆಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 76 ಸೂಚನೆಗಳು ಅಂಗೀಕೃತಗೊಂಡಿದ್ದು, 42 ಸೂಚನೆಗಳಿಗೆ ಸರಕಾರದಿಂದ ಉತ್ತರಗಳನ್ನು ಸ್ವೀಕರಿಸಲಾಗಿದೆ.
2 ಖಾಸಗಿ ಸದಸ್ಯರ ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ಮೂರು ಹಕ್ಕುಚ್ಯುತಿ ಸೂಚನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ ಎರಡು ಹಕ್ಕುಚ್ಯುತಿ ಸೂಚನೆಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗಿದೆ. ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕಗಳು ಸೇರಿದಂತೆ, ಒಟ್ಟು 18 ವಿಧೇಯಕಗಳನ್ನು ಮಂಡಿಸಲಾಗಿದ್ದು, ಅದರಲ್ಲಿ 17ನೆ ವಿಧೇಯಕಗಳು ಅಂಗೀಕಾರಗೊಂಡಿದ್ದು, 1 ವಿಧೇಯಕವನ್ನು ಹಿಂಪಡೆಯಲಾಗಿದೆ.
ರಾಜ್ಯ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಹಾಗೂ ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2017ನೆ ಸಾಲಿನ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 31ನೆ ಮಾರ್ಚ್, 2017ಕ್ಕೆ ಭಾರತದ ಸಂವಿಧಾನದ ಅನುಚ್ಛೇದ 151(2)ನೆ ಮೆರೆಗೆ 4 ವರದಿಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಮೇಳಿನ 1 ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.