ಹಿರಿಯ ಸಾಹಿತಿ ವಿಜಯಾ ದಬ್ಬೆ ನಿಧನ
ಬೆಂಗಳೂರು, ಫೆ,23: ಮಹಿಳಾಪರ ಹೋರಾಟಗಾರ್ತಿಯಾಗಿ, ಮಹಿಳೆಯರ ನೋವು, ಸಂಕಷ್ಟಗಳನ್ನು ಸಾಹಿತ್ಯದ ಮೂಲಕ ಎಳೆ ಎಳೆಯಾಗಿ ಬಿಡಿಸಿಟ್ಟ ಹಿರಿಯ ಸಾಹಿತಿ ವಿಜಯಾ ದಬ್ಬೆ ಇಂದು ಸಂಜೆ ಉಸಿರಾಟದ ತೊಂದರೆಯಿಂದ ನಿಧನರಾದರು.
ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದ ವಿಜಯಾ ದಬ್ಬೆ ಅವರು ರಾಜ್ಯದ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಕನ್ನಡದ ಮೊದಲ ಸ್ತ್ರೀವಾದಿ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಮಾನವೀಯ ಚಿಂತನೆ ಮತ್ತು ಪ್ರಗತಿಪರ ಆಶಯಗಳ ಲೇಖಕಿಯಾಗಿದ್ದು, ತಮ್ಮ ನಂಬಿಕೆ ಮತ್ತು ಚಿಂತನೆಗಳಿಗೆ ತಕ್ಕಂತೆಯೇ ಎಲ್ಲ ಬಗೆಯ ಕಂದಾಚಾರಗಳನ್ನೂ ಬದಿಗೊತ್ತಿ ಬದುಕಿ ತೋರಿ, ತಮ್ಮ ದಿಟ್ಟ ಬರವಣಿಗೆಗಳಿಂದ ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದವರು.
ಲೇಖಕಿ ಡಾ.ವಿಜಯಾ ದಬ್ಬೆ ನೇರ ಹಾಗೂ ನಿಷ್ಠುರ ಮಾತು ಮತ್ತು ನಡವಳಿಕೆಯ ಮೂಲಕ ಎಪ್ಪತ್ತು-ಎಂಬತ್ತರ ದಶಕದಲ್ಲಿ ಕನ್ನಡ ಸಾರಸ್ವತ ಲೋಕದ ತೀವ್ರ ಗಮನ ಸೆಳೆದವರು. ಮಾತಿನಲ್ಲಿ ಹರಿತವಿರುವಂತೆ ಬರವಣಿಗೆಯಲ್ಲೂ ಖಚಿತತೆ ಮತ್ತು ಪ್ರಾಮಾಣಿಕತೆಗಳ ಜೀವ ಎರೆವ ಅಪರೂಪದ ಲೇಖಕಿ ಎನಿಸಿಕೊಂಡಿದ್ದರು.
‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ತಿರುಗಿ ನಿಂತ ಪ್ರಶ್ನೆ’, ‘ಇತಿಗೀತಿಕೆ’ ಎಂಬ ನಾಲ್ಕು ಕವನಸಂಕಲನಗಳು; ‘ನಯಸೇನ’, ‘ಸಂಪ್ರತಿ’, ‘ಮಹಿಳೆ, ಸಾಹಿತ್ಯ, ಸಮಾಜ’, ‘ನಾರಿ ದಾರಿ ದಿಗಂತ’, ‘ಅನುಪಮಾ ನಿರಂಜನ’ ಮತ್ತು ‘ಮಹಿಳೆ ಮತ್ತು ಮಾನವತೆ’ ಎಂಬ ಆರು ವಿಮರ್ಶಾ ಸಂಕಲನಗಳು; ‘ನಾಗಚಂದ್ರ- ಒಂದು ಅಧ್ಯಯನ’, ‘ಹಿತೈಷಿಯ ಹೆಜ್ಜೆಗಳು’ ಮತ್ತು ‘ಸಾರ ಸರಸ್ವತಿ’ ಎಂಬ ಮೂರು ಮಹತ್ವದ ಸಂಶೋಧನಾ ಕೃತಿಗಳಷ್ಟೇ ಅಲ್ಲದೆ ಸಂಪಾದನೆ, ವ್ಯಕ್ತಿಚಿತ್ರ, ಪ್ರವಾಸ ಹಾಗೂ ಅನುವಾದಗಳೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದವರು.
ಡಾ. ವಿಜಯಾ ದಬ್ಬೆಯವರ ಸಾರಸ್ವತ ಸಾಧನೆಗೆ ಕವಿತಾ ಸ್ಮಾರಕ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ರತ್ನಮ್ಮ ಹೆಗಡೆ ಪ್ರಶಸ್ತಿ ಹಾಗೂ 2012ರಲ್ಲಿ ಡಾ.ಎಲ್.ಬಸವರಾಜು ಪ್ರಶಸ್ತಿ ಪಡೆದು ಗೌರವಕ್ಕೆ ಭಾಜನರಾಗಿದ್ದರು. ಹಿರಿಯ ಸಾಹಿತಿಯಾದ ವಿಜಯಾ ಅವರು ಬೇಲೂರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.