×
Ad

ಮತದಾರರ ಓಲೈಕೆಗೆ ಸೀರೆ, ಪಂಚೆ, ವಿತರಣೆ ಆರೋಪ: ಬಿಜೆಪಿಯಿಂದ ವಿಧಾನಸಭೆಯಲ್ಲಿ ಗದ್ದಲ

Update: 2018-02-23 21:53 IST

ಬೆಂಗಳೂರು, ಫೆ.23: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಸೀರೆ, ಪಂಚೆ, ಗೃಹಪಯೋಗಿ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಗದ್ದಲ ಮಾಡಿದರು.

ಎಂ.ಬಿ.ಪಾಟೀಲ್ ವಿತರಿಸಿದ್ದಾರೆ ಎನ್ನಲಾದ ಬ್ಯಾಗ್ ಹಾಗೂ ಅದರಲ್ಲಿರುವ ವಸ್ತುಗಳನ್ನು ಸದನದಲ್ಲಿ ಪ್ರದರ್ಶಿಸಲು ಯತ್ನಿಸಿದ ಬಿಜೆಪಿ ಸದಸ್ಯರಿಗೆ ಪ್ರವೇಶ ದ್ವಾರದಲ್ಲಿ ಮಾರ್ಷಲ್‌ಗಳು ತಡೆದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ್ ಹಾಗೂ ಸತೀಶ್‌ರೆಡ್ಡಿ, ಮಾರ್ಷಲ್‌ಗಳ ಜತೆ ವಾಗ್ವಾದ ನಡೆಸಿದರು.

ಅಲ್ಲದೆ, ಅರವಿಂದ ಬೆಲ್ಲದ್ ತೆಗೆದುಕೊಂಡು ಬಂದಿದ್ದ ವಸ್ತುಗಳನ್ನು ಹಿಂಪಡೆಯುವಲ್ಲಿ ಮಾರ್ಪಲ್‌ಗಳು ಯಶಸ್ವಿಯಾದರು. ಆದರೂ, ಎಂ.ಬಿ.ಪಾಟೀಲ್ ಭಾವಚಿತ್ರವಿರುವ ಬ್ಯಾಗ್ ಅನ್ನು ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಪ್ರದರ್ಶಿಸಿ, ಮತದಾರರಿಗೆ ಆಮಿಷವೊಡ್ಡುತ್ತಿರುವ ಸಚಿವರ ವರ್ತನೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್, ಮತದಾರರಿಗೆ ಸೀರೆ, ಪಂಚೆ, ದುಡ್ಡು ಹಂಚುವುದನ್ನು ಯಾವ ಪಕ್ಷವೂ ಗುತ್ತಿಗೆ ಪಡೆದುಕೊಂಡಿಲ್ಲ. ಲಂಚ ಪಡೆಯಬಹುದು ಆದರೆ ಲಂಚ ಪಡೆದು ಸಿಕ್ಕಿ ಹಾಕಿಕೊಳ್ಳಬಾರದು ಎಂದು ತಮ್ಮದೆ ಶೈಲಿಯಲ್ಲಿ ವಿವರಣೆ ನೀಡಿದರು.

ಈ ಹಿಂದೆ ಶಾಸಕರಾಗಿದ್ದ ನಾರಾಯಣಕುಮಾರ್ ಎಂಬವರು ಹೊರಗಿನ ವ್ಯಕ್ತಿಯೊಬ್ಬರನ್ನು ಸದನದೊಳಗೆ ತರಲು ಯತ್ನಿಸಿದ್ದರು. ಕಳಪೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂಬುದನ್ನು ತೋರಿಸಲು ಅಕ್ಕಿಯನ್ನು ತರಲು ಯತ್ನಿಸಲಾಗಿತ್ತು. ಆಗ ಸ್ಪೀಕರ್ ಪೀಠದಲ್ಲಿದ್ದವರು ಅದಕ್ಕೆ ಅವಕಾಶ ನೀಡಲಿಲ್ಲ. ಈ ಸದನ ವಸ್ತು ಪ್ರದರ್ಶನದ ಸ್ಥಳವಾಗಬಾರದು. ಆಕ್ಷೇಪಣೆಗಳು, ಟೀಕೆಗಳನ್ನು ಚರ್ಚೆಯ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ರಮೇಶ್‌ಕುಮಾರ್ ಹೇಳೀದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News