ಮಕ್ಕಳ ಬೌದ್ಧಿಕ ವಿಕಾಸಕ್ಕೆ ಕ್ವಿಝ್ ಸಹಕಾರಿ: ಡಾ.ಶಾಲಿನಿ ರಜನೀಶ್

Update: 2018-02-23 16:48 GMT

ಬೆಂಗಳೂರು, ಫೆ. 23: ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಆಗು-ಹೋಗಗಳನ್ನು, ಪ್ರಚಲಿತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಬಹಳ ಪ್ರಮುಖವಾಗಿ ಪ್ರಶ್ನಿಸುವ ಕೌಶಲ ಹೊಂದಿರಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮ ಅಡಿಯಲ್ಲಿ ಆಯೋಜಿಸಲಾದ ಸರ್ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ವಿಜ್ಞಾನ ಪರಿಷತ್ತಿನ ಅಧ್ಯಕ್ಷ, ಮೇಲ್ಮನೆ ಸದಸ್ಯ ಎಸ್.ವಿ.ಸಂಕನೂರ, ಇದೊಂದು ಶೈಕ್ಷಣಿಕವಾಗಿ ಮಹತ್ವಪೂರ್ಣವಾದ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ಬಾವಿ ವಿಜ್ಞಾನಿಗಳನ್ನು ರೂಪಿಸುವ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢಶಿಕ್ಷಣ ವಿಭಾಗದ ನಿರ್ದೇಶಕಿ ಫಿಲೋಮಿನಾ ಲೋಬೋ, ದೂರದರ್ಶನ ಕೇಂದ್ರದ ಆರ್.ಎನ್.ಎಸ್. ರೆಡ್ಡಿ, ರಾಜಕುಮಾರ ಉಪಾಧ್ಯಾಯ, ರಸಪ್ರಶ್ನೆ ಸ್ಪರ್ಧೆಯ ಸಂಯೋಜಕ ಆರ್.ಎಸ್. ಪಾಟೀಲ, ಕರಾಪ ಖಜಾಂಚಿ ನರೇಂದ್ರ ಆಡನೂರ, ಕಾರ್ಯಕಾರಿ ಸಮಿತಿ ಸದಸ್ಯ ಈ.ಬಸವರಾಜು ಉಪಸ್ಥಿತರಿದ್ದರು. ಡಾ.ನಾ.ಸೋಮೇಶ್ವರ ಕ್ವಿಝ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News