ನೌಕರಿ ಖಾಯಂಗೊಳಿಸದಿದ್ದರೆ ಸ್ವಚ್ಚತೆ ಕಾರ್ಯ ಸ್ಥಗಿತ: ಪೌರ ಕಾರ್ಮಿಕರ ಎಚ್ಚರಿಕೆ

Update: 2018-02-24 13:32 GMT

ಬೆಂಗಳೂರು, ಫೆ. 24: ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ‘ಡಿ’ದರ್ಜೆ ನೌಕರರ ಖಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಹದಿನೈದು ದಿನಗಳೊಳಗೆ ಈಡೇರಿಸದಿದ್ದಲ್ಲಿ ಮಾ.14ರಿಂದ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದು ಎಂದು ಪೌರ ಕಾರ್ಮಿಕರು ಹಾಗೂ ‘ಡಿ’ದರ್ಜೆ ನೌಕರರ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎನ್.ನಾರಾಯಣ್, ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಗುತ್ತಿಗೆ ಪೌರ ಕಾರ್ಮಿಕರು, ತೋಟಗಾರಿಕೆ ಮಾಲಿ ಮೇಸ್ತ್ರಿಗಳಿಗೆ, ಸಮಾನ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು ಸೇರಿದಂತೆ ‘ಡಿ’ದರ್ಜೆಯಡಿ ಕಾರ್ಯನಿರ್ವಹಿಸುವ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15ದಿನದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಎಚ್ಚರಿಸಿದರು.

ಖಾಲಿ ಇರುವ 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಗುತ್ತಿಗೆ ಪೌರ ಕಾರ್ಮಿಕರು ಹಾಗೂ ದಿನಗೂಲಿ ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನದಡಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾ.ಪಂ.ಪೌರ ಕಾರ್ಮಿಕರು, ಗ್ಯಾಂಗ್‌ಮ್ಯಾನ್, ನೀರು ಸರಬರಾಜು ಸೇವಕರ ಸೇವೆ ಖಾಯಂ ಗೊಳಿಸಬೇಕು. ಗುತ್ತಿಗೆ ಪೌರಕಾರ್ಮಿಕರ 212ಕೋಟಿ ರೂ.ಪಿಎಫ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೆ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.

ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಪೌರ ಕಾರ್ಮಿಕರಿಗೆ ಅನಾನುಕೂಲವಾಗುವಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ನಗರದ ವಿಸ್ತೀರ್ಣ ಆಧರಿಸಿ ಪೌರ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಡಬೇಕು. ನಿವೃತ್ತಿ ಪೌರ ಕಾರ್ಮಿಕರು ಹಾಗೂ ಗ್ಯಾಂಗ್ ಮ್ಯಾನ್ ಸೇರಿ ‘ಡಿ’ ದರ್ಜೆ ನೌಕರರಿಗೆ ನಿವೃತ್ತ ನಂತರವು ಆರೋಗ್ಯ ಗುರುತಿನ ಚೀಟಿ ಮುಂದುವರೆಸಿ, ಮರಣ ಹೊಂದಿದರೆ ಶವಸಂಸ್ಕಾರಕ್ಕೆ 20 ಸಾವಿರ ರೂ.ಗಳನ್ನು ಪಾಲಿಕೆವತಿಯಿಂದ ನೀಡಬೇಕು.

ಮುಖ್ಯ ಕಚೇರಿಯಿಂದ ತನಿಖಾ ತಂಡ ರಚಿಸಿ ಕಾಲಕಾಲಕ್ಕೆ ಪೌರ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು ನಮ್ಮ ಕೆಲಸಕ್ಕೆ ಅಗತ್ಯವಿರುವ ಪರಿಕರಗಳನ್ನು ಒದಗಿಸುವುದು ಸೇರಿದಂತೆ ಎಲ್ಲ ಬೇಡಿಕೆ ಈಡೇರಿಸದಿದ್ದಲ್ಲಿ ಮಾರ್ಚ್ 14ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಬಾಬು, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಮಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News