ಬಂಧಿತ ಹಿಂಜಾವೇ ಕಾರ್ಯಕರ್ತ ಕೆ.ಟಿ. ನವೀನ್ ಮಂಗಳೂರಿಗೆ ಬಂದಿದ್ದೇಕೆ ?
ಬೆಂಗಳೂರು, ಫೆ. 24: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ)ವು ನಗರದ ಮೆಜೆಸ್ಟಿಕ್‌ನಲ್ಲಿ ಹಿಂದೂ ಜಾಗರಣಾ ವೇದಿಕೆಯ ಓರ್ವ ಮುಖಂಡನನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಮಂಗಳೂರಿನಿಂದ ಮೂವರು ಯುವಕರನ್ನು ಎಸ್‌ಐಟಿ ತಂಡವು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದ್ದು, ಅವರನ್ನು ತೀವ್ರ ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ ಎನ್ನಲಾಗಿದೆ. ಇದನ್ನು ಪೊಲೀಸರು ಅಧಿಕೃತವಾಗಿ ಹೇಳುತ್ತಿಲ್ಲ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಮದ ನಿವಾಸಿಯಾಗಿದ್ದ ಕೆ.ಟಿ. ನವೀನ್ ಯಾನೆ ಹೊಟ್ಟೆ ಮಂಜ ಬಂಧಿತ ಆರೋಪಿಯಾಗಿದ್ದಾನೆ.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನಾಗಿದ್ದ ಈತ ಫೆ.18ರಂದು ಸಂಜೆ 6 ಗಂಟೆಗೆ ಪಿಸ್ತೂಲ್‌ನೊಂದಿಗೆ ಮೆಜೆಸ್ಟಿಕ್‌ಗೆ ಬಂದಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ದಾಳಿ ನಡೆಸಿ ಬಂಧಿಸಿದೆ. ಆರೋಪಿಯಿಂದ ನಾಡ ಪಿಸ್ತೂಲ್ ಹಾಗೂ ಪಾಯಿಂಟ್ 32 ರಿವಾಲ್ವರ್‌ನ ಐದು ಸಜೀವ ಗುಂಡುಗಳನ್ನು ಜಫ್ತಿ ಮಾಡಲಾಗಿದ್ದು, ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೀನ್ ಬಳಿ ಪಿಸ್ತೂಲ್ ಸಿಕ್ಕಿದ್ದರಿಂದ ಅನುಮಾನಗೊಂಡ ಎಸ್‌ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಆತ ನೀಡಿದ ಮಾಹಿತಿಯ ಆಧಾರದಲ್ಲಿ ಗುರುವಾರ ರಾತ್ರಿ ಮಂಗಳೂರಿನ ಮೂವರು ಯುವಕರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.
ನವೀನ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿ ನವೀನ್ ಯಾವ ಉದ್ದೇಶಕ್ಕಾಗಿ ನಗರಕ್ಕೆ ಬಂದಿದ್ದ ಮತ್ತು ಆತನಿಗೆ ಶಸ್ತ್ರಾಸ್ತ್ರ ನೀಡಿದವರು ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ಪತ್ರಿಕೆಗೆ ತಿಳಿಸಿವೆ.
ಆರೋಪಿ ನವೀನ್‌ಗೆ ಗೌರಿ ಲಂಕೇಶ್ ಹಂತಕರ ಬಗ್ಗೆ ಸಂಪೂರ್ಣ ಮಾಹಿತಿಯಿದೆ ಎನ್ನಲಾಗುತ್ತಿದೆ. ಆದರೆ ಆತ ಕೃತ್ಯದಲ್ಲಿ ನೇರ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಆರೋಪಿ ನವೀನ್ ಮಂಗಳೂರಿನಲ್ಲಿ ಕೇಸರಿ ಪಡೆಯ ಯುವಕನೊಬ್ಬನನ್ನು ಸಂಪರ್ಕಿಸಿದ್ದ. ಆತ ಉತ್ತರ ಭಾರತದ ಇಬ್ಬರು ಶಾರ್ಪ್ ಶೂಟರ್‌ಗಳನ್ನು ನವೀನ್‌ಗೆ ಪರಿಚಯಿಸಿದ ಎನ್ನಲಾಗಿದೆ.
ಉತ್ತರ ಭಾರತದ ಇಬ್ಬರು ಶಾರ್ಪ್ ಶೂಟರ್‌ಗಳನ್ನು ಕರೆಸಿಕೊಂಡ ನವೀನ್ ಕೊಳ್ಳೇಗಾಲ-ಕನಕಪುರ ಮಧ್ಯೆಯ ತೋಟವೊಂದರಲ್ಲಿ ಆಶ್ರಯ ನೀಡಿ ಗೌರಿ ಲಂಕೇಶ್‌ರ ಬಗ್ಗೆ ಚಲನವಲನಗಳನ್ನು ತಿಳಿಯಲು ನೆರವಾದ ಎನ್ನಲಾಗಿದೆ. ಶಾರ್ಪ್‌ಶೂಟರ್‌ಗಳು ಗೌರಿ ಲಂಕೇಶ್‌ರ ಕಚೇರಿ ಮತ್ತು ಮನೆಯ ಬಳಿ ಕೆಲಕಾಲ ಸುಳಿದಾಡಿದ್ದು, ಇದಕ್ಕೂ ನವೀನ್ ಸಹಕರಿಸಿದ್ದ ಎನ್ನಲಾಗಿದೆ.
ಶಾರ್ಪ್ ಶೂಟರ್‌ಗಳನ್ನು ಬೆಂಗಳೂರಿಗೆ ಕರೆಸಿದ್ದಲ್ಲದೆ, ಕೃತ್ಯದ ಬಳಿಕ ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಕೂಡ ನವೀನ್ ನೆರವಾಗಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿಯೂ ಕೂಡ ಎಸ್‌ಐಟಿ ತಂಡ ತನಿಖೆಯನ್ನು ತೀವ್ರಗೊಳಿಸಿದೆ.
ಸಿಹಿ ತಿಂಡಿ ಹಂಚಿದ್ದ: ಕೃತ್ಯ ನಡೆಯುವಾಗ ನವೀನ್ ನಗರದಲ್ಲಿ ಇರಲಿಲ್ಲ ಎನ್ನಲಾಗಿದೆ. ಮಂಡ್ಯದಲ್ಲಿದ್ದ ಆತ ಕೃತ್ಯ ನಡೆದ ತಕ್ಷಣ ಸ್ನೇಹಿತರಿಗೆ ಸಿಹಿ ಹಂಚಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ಮಾಹಿತಿ ಕಲೆ ಹಾಕಿರುವ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದಾರೆ.
ಸಂಚಲನ: ಗೌರಿ ಲಂಕೇಶ್ ಹತ್ಯೆಯಲ್ಲಿ ಉತ್ತರ ಭಾರತದ ಇಬ್ಬರು ಶಾರ್ಪ್ ಶೂಟರ್‌ಗಳು ಹಾಗೂ ಮಂಡ್ಯದ ಹಿಂಜಾವೇ ಕಾರ್ಯಕರ್ತನಲ್ಲದೆ ಮಂಗಳೂರಿನಿಂದ ಮೂವರು ಆರೋಪಿಗಳನ್ನು ವಶಪಡಿಸಿಕೊಂಡಿರುವ ಮಾಹಿತಿ ಬೆಳಕಿಗೆ ಬರುತ್ತಲೇ ಮಂಗಳೂರಿನಲ್ಲಿ ಸಂಚಲನವಾಗಿದೆ.
ಮಾಹಿತಿ ಇಲ್ಲ: ಪೊಲೀಸ್ ಆಯುಕ್ತರು
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಮೂವರು ಯುವಕರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಪತ್ರಿಕೆಗೆ ತಿಳಿಸಿದ್ದಾರೆ.