400ಕ್ಕೂ ಅಧಿಕ ಡ್ರೋನ್‌ಗಳು,ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳನ್ನು ಬಯಸಿರುವ ಭಾರತೀಯ ಸೇನೆ

Update: 2018-02-24 15:26 GMT

ಹೊಸದಿಲ್ಲಿ,ಫೆ.24: ಮುಂದಿನ ಒಂದು ದಶಕದಲ್ಲಿ 400 ಕ್ಕೂ ಅಧಿಕ ವಿವಿಧ ಮಾದರಿಗಳ ಡ್ರೋನ್‌ಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊಂದಲು ಭಾರತೀಯ ಸಶಸ್ತ್ರ ಪಡೆಗಳು ಬಯಸಿವೆ. ಅಲ್ಲದೇ ಶತ್ರುಗುರಿಗಳು, ಜೊತೆಗೆ ಉಪಗ್ರಹಗಳನ್ನೂ ಧ್ವಂಸ ಮಾಡುವ ಸಾಮರ್ಥ್ಯವುಳ್ಳ ಅಧಿಕ ಶಕ್ತಿಯ ಲೇಸರ್‌ಗಳು ಮತ್ತು ಮೈಕ್ರೋವೇವ್‌ಗಳಂತಹ ನಿರ್ದೇಶಿತ ಶಕ್ತ್ಯಾಯುಧಗಳು(ಡಿಇಡಬ್ಲೂ) ಅವುಗಳಿಗೆ ಅಗತ್ಯವಾಗಿವೆ.

ರಕ್ಷಣಾ ಸಚಿವಾಲಯದ ನೂತನ ‘ತಂತ್ರಜ್ಞಾನ ದೃಷ್ಟಿಕೋನ ಮತ್ತು ಸಾಮರ್ಥ್ಯವೃದ್ಧಿ ಮಾರ್ಗಸೂಚಿ-2018’ರಲ್ಲಿ ಇಂತಹ ಹಲವಾರು ಮಿಲಿಟರಿ ಉಪಕರಣಗಳನ್ನು ಗುರುತಿಸಲಾಗಿದೆ. 2020ರ ದಶಕದಲ್ಲಿ ದೇಶದ ದಾಳಿ ಮತ್ತು ರಕ್ಷಣಾ ಮಿಲಿಟರಿ ಅಗತ್ಯಗಳ ಬಗ್ಗೆ ರಕ್ಷಣಾ ಕೈಗಾರಿಕೆಗಳು ಸಜ್ಜಾಗಲು ಅವುಗಳಿಗೆ ತಿಳುವಳಿಕೆಯನ್ನು ನೀಡುವುದು ಈ ಮಾರ್ಗಸೂಚಿಯ ಉದ್ದೇಶವಾಗಿದೆ.

  ಈ ಮಾರ್ಗಸೂಚಿಯು ತಂತ್ರಜ್ಞಾನ ಅಭಿವೃದ್ಧಿ, ಸಹಭಾಗಿತ್ವ ಮತ್ತು ಉತ್ಪಾದನಾ ವ್ಯವಸ್ಥೆಯ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಲು ರಕ್ಷಣಾ ಕೈಗಾರಿಕೆಗಳಿಗೆ ನೆರವಾಗ ಬಹುದು. ಭಾರತೀಯ ಕೈಗಾರಿಕೆಯು ಯಾವುದೇ ಅಭಿವೃದ್ಧಿ ಕಾರ್ಯ ಮತ್ತು ಸಹಭಾಗಿತ್ವಕ್ಕೆ ಮುಂದಾಗುವ ಮುನ್ನ ‘ಮೇಕ್ ಇನ್ ಇಂಡಿಯಾ’ಕ್ಕೆ ಸರಕಾರದ ಉತ್ತೇಜನಕ್ಕೆ ಸೂಕ್ತ ಮಹತ್ವವನ್ನು ನೀಡಬೇಕು ಎಂದು ಮಾರ್ಗಸೂಚಿಯು ಹೇಳಿದೆ.

 ಮುಂದಿನ ತಲೆಮಾರಿನ ವಿನಾಶಕ ನೌಕೆಗಳು, ಯುದ್ಧನೌಕೆಗಳು ಮತ್ತು ಕ್ಷಿಪಣಿಗಳಿಂದ ಹಿಡಿದು ಪದಾತಿದಳಗಳ ಶಸ್ತ್ರಾಸ್ತ್ರಗಳು, ವಿಶೇಷ ಮದ್ದುಗುಂಡುಗಳು ಮತ್ತು ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (ಸಿಬಿಆರ್‌ಎನ್) ರಕ್ಷಣಾ ವ್ಯವಸ್ಥೆಗಳವರೆಗೆ ಅತ್ಯಗತ್ಯ ಉಪಕರಣಗಳಲ್ಲದೆ, ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ಮಾದರಿಗಳ ಮಾನವರಹಿತ ವೈಮಾನಿಕ ವಾಹನಗಳು ಅಥವಾ ಡ್ರೋನ್‌ಗಳಿಗೂ ಮಾರ್ಗಸೂಚಿ ಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಸಶಸ್ತ್ರ ಪಡೆಗಳು ಹಾಲಿ 200ಕ್ಕೂ ಅಧಿಕ ಡ್ರೋನ್‌ಗಳನ್ನು ಹೊಂದಿದ್ದು, ಈ ಪೈಕಿ ಹೆಚ್ಚಿನವು ಇಸ್ರೇಲ್‌ನಿಂದ ಆಮದಾಗಿವೆ.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯು 2,650 ಕೋ.ರೂ.ಗಳ ವೆಚ್ಚದಲ್ಲಿ ‘ಘಾತಕ್’ ಡ್ರೋನ್‌ಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿ ಕೊಂಡಿದೆಯಾದರೂ, ಸೇನೆ ಮತ್ತು ನೌಕಾಪಡೆಗಳಿಗೆ 30 ಕ್ಕೂ ಅಧಿಕ ಹೋರಾಟ ದೂರನಿಯಂತ್ರಿತ ವಿಮಾನಗಳ ಅಗತ್ಯವಿದೆ ಎಂದು ಮಾರ್ಗಸೂಚಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News