ಬೆಂಗಳೂರು: ಪಿಎಫ್ಐ ನಿಷೇದ ಆದೇಶ ಖಂಡಿಸಿ ಪ್ರತಿಭಟನೆ

Update: 2018-02-24 15:26 GMT

ಬೆಂಗಳೂರು, ಫೆ.24: ಜಾರ್ಖಂಡ್‌ನಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮೇಲೆ ನಿಷೇಧ ಹೇರಿ ಸರಕಾರ ಆದೇಶ ಹೊರಡಿಸಿರುವುದನ್ನು ಖಂಡಿಸಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಿಎಫ್‌ಐ ಬೆಂಗಳೂರು ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿ, ಈ ಕೂಡಲೇ ಜಾರ್ಖಂಡ್ ಸರಕಾರ ಪಿಎಫ್‌ಐ ನಿಷೇಧ ಆದೇಶ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್, ಪಿಎಫ್‌ಐ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಭಾರತದ 17 ರಾಜ್ಯಗಳಲ್ಲಿದ್ದು, ನೋಂದಣಿ ಹೊಂದಿದೆ. ವಿವಿಧ ಧರ್ಮ, ಜಾತಿಯ ಸದಸ್ಯರು ನಮ್ಮ ಸಂಘಟನೆಯಲ್ಲಿದ್ದಾರೆ. ಆದರೆ, ಏಕಾಏಕಿ ಸಂಘಟನೆಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ಹೇಳಿದರು.

ವಿದೇಶಿ ನೆಲದಲ್ಲಿರುವ ಯಾವುದೇ ಸಂಘಟನೆಯೊಂದಿಗೆ ನಾವು ನಂಟು ಹೊಂದಿಲ್ಲ. ಐಸಿಸಿನಂತಹ ಸಂಘಟನೆಗಳೊಂದಿಗೆ ದೂರು ಇರುವಂತೆ ನಾವು ನಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ನಿರಂತತ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಎಂದ ಅವರು, ಸುಳ್ಳು ಆರೋಪಗಳನ್ನು ಸೃಷ್ಟಿಸಿ ಐಸಿಸಿನೊಂದಿಗೆ ಪಿಎಫ್‌ಐ ನಂಟು ಇದೆ ಎಂದು ಹೇಳುತ್ತಾರೆ. ಆದರೆ,ಇದುವರೆಗೂ ಯಾವುದೇ ತನಿಖೆಯಲ್ಲಿ ಸಾಬೀತುಗೊಂಡಿಲ್ಲ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪಿಎಫ್‌ಐನ ಮುಖಂಡರಾದ ಇಲ್ಯಾಸ್, ನಾಸೀರುದ್ದೀನ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News