ಯುವಜನತೆ ಸಾಹಿತ್ಯ ಅಧ್ಯಯನ ಮಾಡಬೇಕು: ದೊಡ್ಡರಂಗೇಗೌಡ

Update: 2018-02-24 16:35 GMT

ಬೆಂಗಳೂರು, ಫೆ. 24: ಕನ್ನಡ ಸಾಹಿತ್ಯಕ್ಕೆ ತನ್ನದೆ ಆದ ಪುರಾತನ ಇತಿಹಾಸವಿದೆ. ಯುವಪೀಳಿಗೆ ಐತಿಹಾಸಿಕ ಪಾರಂಪರೆಯುಳ್ಳ ಕನ್ನಡವನ್ನು ಕಡೆಗಣಿಸಿ, ಅರೆಬರೆ ಇಂಗ್ಲೀಷ್ ಸಾಹಿತ್ಯ ಓದಿದ ಭ್ರಮೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿ ಪಂಡಿತರೆನಿಸಿ ಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಯುವಜನತೆ ಕನ್ನಡ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಬೇಕಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡ ಕರೆ ನೀಡಿದ್ದಾರೆ.

ಶನಿವಾರ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಮಾತನಾಡಿದ ಅವರು, ಯುವಕರು ಕನ್ನಡವೆಂದರೆ ಮೂಗು ಮುರಿಯುತ್ತಾರೆ. ಆದರೆ, 2 ಸಾವಿರ ವರ್ಷಗಳ ಹಿಂದೆ ಕನ್ನಡ ಪರಂಪರೆಯು ಅಸ್ತಿತ್ವದಲ್ಲಿತ್ತು. ಈಜಿಪ್ಟ್ ನಲ್ಲಿ ಅಲೆಕ್ಸಾಂಡರ್ ಕಾಲದಲ್ಲಿ ಕನ್ನಡ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ಕನ್ನಡ ಪದವನ್ನು ಸೂಚಿಸುವ ಹರಗಡ ಎಂಬ ಊರು ಇದ್ದು, ಕನ್ನಡದ ವಿಸ್ತಾರತೆ ಹಾಗೂ ವಿಶ್ವವ್ಯಾಪಿ ಎಂಬುದಕ್ಕೆ ಸಾಕ್ಷಿಯಾಗಿದೆ. ಯುವಪೀಳಿಗೆ ಐತಿಹಾಸಿಕ ಪಾರಂಪರೆಯುಳ್ಳ ಕನ್ನಡವನ್ನು ಕಡೆಗಣಿಸಿ, ಅರೆಬರೆ ಆಂಗ್ಲ ಸಾಹಿತ್ಯವನ್ನು ಓದಿಕೊಂಡ ಭ್ರಮೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ ಕೂಡಲೆ ದೊಡ್ಡ ಪಂಡಿತರೆನಿಸುವುದಿಲ್ಲ. ವಿಶ್ವವ್ಯಾಪಿಯಾದ ಮಾತೃ ಭಾಷೆ ಕನ್ನಡ ಎಂದು ಗರ್ವಪಡಿ ಎಂದು ಹೇಳಿದರು.

ಹನ್ನೆರಡನೆ ಶತಮಾನದ ವಚನಕಾರರ ಸಾಹಿತ್ಯಗಳು ಬೇರೆ ಭಾಷೆಗಳಿಗೆ ಅನುವಾದಗೊಂಡು ವಿಶ್ವದಾದ್ಯಂತ ಅವರ ಸಂದೇಶಗಳು ಹರಡುತ್ತವೆ ಎಂದು ಊಹಿಸಿರಲಿಲ್ಲ. ಕಿಟಲ್ ಅವರಂತಹ ಶಿಕ್ಷಣ ಪ್ರೇಮಿ ಕನ್ನಡಕ್ಕೆ ಅಗಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಪಾಶ್ಚಿಮಾತ್ಯರು ಎಂದು ಕರೆಯಲು ಸಾಧ್ಯವಿಲ್ಲ ಎಂದು ನುಡಿದರು.

ಕನ್ನಡ ಬಹುಮುಖಿಯಾಗಿ ಬೆಳೆಯಲು ಕನ್ನಡೇತರರ ಶ್ರಮ ಸಾಕಾಷ್ಟಿದೆ. ಅರ್ಥಶಾಸ್ತ್ರ, ಯೋಗ, ಭೂಗರ್ಭ, ವೈದ್ಯಕೀಯ ವಿಜ್ಞಾನಗಳನ್ನು ಕನ್ನಡದಲ್ಲಿ ಬರೆಯಬಹುದೆಂಬುದುನ್ನು ಕನ್ನಡ ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಪುರಸ್ಕತ ಡಾ.ಆರ್.ಎನ್.ತಾರಾನಾಥನ್ ಮಾತನಾಡಿ, ಭಾರತೀಯ ಸಂಸ್ಕತಿ ಪಾಶ್ಚಿಮಾತ್ಯ ದೇಶಗಳಿಗೆ ಮಾದರಿಯಾಗಿವೆ. ಇದರ ಅರಿವಿಲ್ಲದ ಯುವಪೀಳಿಗೆ ಫಾಶ್ಚತ್ಯ ಸಂಸ್ಕೃತಿಗಳ ಬೆನ್ನು ಬಿದ್ದಿದ್ದಾರೆ. ನಮ್ಮ ಸಂಸ್ಕೃತಿಯ ಪರಂಪರೆ ಏನೆಂಬುದನ್ನು ತಿಳಿಸುವ ಕೆಲಸವಾಗಬೇಕಿದೆ ಎಂದರು. ದಾಸಸಾಹಿತ್ಯ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಕನ್ನಡ ಭಾಷೆಯನ್ನು ಶ್ರೇಷ್ಟಗೊಳಿಸಿದ್ದಾರೆ. ಕನ್ನಡದ ಬೆಳವಣಿಗೆಗೆ ದಾಸಸಾಹಿತ್ಯ ಕೊಡುಗೆ ಅಪಾರ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಮಾಜಿ ಶಾಸಕ ನೆ.ಲ.ಸುರೇಂದ್ರಬಾಬು, ಮಹಾಲಕ್ಷ್ಮಿ ಲೇಔಟ್‌ ಕಸಾಪ ಅಧ್ಯಕ್ಷ ಹೆಚ್.ಎಸ್. ರಾಘವೇಂದ್ರ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಟಿ.ತಿಮ್ಮೇಶ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News