ಬೆಂಗಳೂರು: ಮಾ.2 ರಂದು ಅಂಬಿಗರ ಚೌಡಯ್ಯ ನಿಗಮದ ಲಾಂಛನ ಬಿಡುಗಡೆ

Update: 2018-02-24 18:27 GMT

ಬೆಂಗಳೂರು, ಫೆ. 24: ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಲಾಂಚನವನ್ನು ಮಾ.2ಕ್ಕೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಗಮದ ನೂತನ ಅಧ್ಯಕ್ಷ ಜಗನ್ನಾಥ್ ಜಾಮದಾರ್, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ನಮ್ಮ ಸಮಾಜದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ನಿಗಮದ ಲೋಗೊ ಬಿಡುಗಡೆ ಸಮಾರಂಭ ಯೋಜಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ ವಿಧಾನಸೌಧ ಪಶ್ಚಿಮ ದ್ವಾರದ ದೇವರಾಜು ಅರಸು ಹಾಗೂ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ನಂತರ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದಲ್ಲಿ ಗಡಿನಾಡ ಅಭಿವೃದ್ಧಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಸಚಿವ ಪ್ರಮೋದ್ ಮದ್ವರಾಜ್, ಅಂಬಿಗರ ಚೌಡಯ್ಯ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ ಹಿಂದುಳಿದ ವರ್ಗಗಳ ಮಂತ್ರಿಗಳು ಹಾಗೂ ಅಭಿವೃದ್ಧಿ ನಿಗಮದ ನಿರ್ದೇಶಕರು ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ಸಾಮಾಜಿಕ, ಆಥಿಕವಾಗಿ ಹಿಂದುಳಿದಿರುವ ಗಂಗಾಮತಸ್ಥ ಸಮಾಜವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಸರಕಾರ ನಿಗಮ ಮಂಡಳಿ ಸ್ಥಾಪಿಸಿರುವುದರಿಂದ ನಮ್ಮ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಕೆ.ಎಸ್. ಮೇಲ್ಕರ್, ಹೇಮಾವತಿ, ಜಿ.ಟಿ.ವೆಂಕಟೇಶ್, ಬಸವರಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News