ಶ್ರೀದೇವಿ: ಶ್ರೇಷ್ಠ ನಟಿ, ಅದ್ಭುತ ಡ್ಯಾನ್ಸರ್, ಕಾಮಿಡಿ ಕ್ವೀನ್...

Update: 2018-02-25 07:01 GMT

ಭಾರತೀಯ ಚಿತ್ರರಂಗದ ದಂತಕಥೆ ಎನಿಸಿದ್ದ ಶ್ರೀದೇವಿ ಶನಿವಾರ ರಾತ್ರಿ ದುಬೈನಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಪತಿ ಬೋನಿ ಕಪೂರ್ ಮತ್ತು ಪುತ್ರಿಯರಾದ ಜಾಹ್ನವಿ ಮತ್ತು ಖಷಿಯನ್ನು ಅಗಲಿದ್ದಾರೆ. ಶ್ರೀದೇವಿ, ಅಳಿಯ ಮೋಹಿತ್ ಮಾರ್ವ ವಿವಾಹದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದರು.

ಸಹಜ ನಟನಾ ಸಾಮರ್ಥ್ಯ ಮತ್ತು ಅದ್ಭುತ ನೃತ್ಯ ಕೌಶಲಕ್ಕೆ ಹೆಸರಾಗಿದ್ದ ಈ ಅದ್ಭುತ ತಾರೆ, ಬಾಲಿವುಡ್ ಚಿತ್ರದ ಗಳಿಕೆ ಭವಿಷ್ಯವನ್ನು ನಿರ್ಧರಿಸುತ್ತಿದ್ದ ಕೆಲವೇ ನಟಿಯರ ಪೈಕಿ ಒಬ್ಬರು. 1970ರ ದಶಕದಿಂದ 1990ರ ದಶಕದ ವರೆಗೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಇವರು, ಸವಾಲಿನ ಪರಿಸ್ಥಿತಿಗೆ ತಳ್ಳಲ್ಪಟ್ಟ ಮಹಿಳೆಯ ಸೂಕ್ಷ್ಮ ಅಭಿವ್ಯಕ್ತಿಗಾಗಿ ಮೆಚ್ಚುಗೆ ಪಡೆದಿದ್ದರು.

ಬಾಲನಟಿಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಾಗಲೇ ಶ್ರೀದೇವಿ ದಟ್ಟ ಪ್ರಭಾವ ಬೀರಿದ್ದರು. ರವಿ ಉದ್ಯಾವರ ಅವರ ಮಾಮ್ (2017) ಇವರ ಕಟ್ಟಕಡೆಯ ಚಿತ್ರ. ಮಗಳ ಮೇಲಿನ ಅತ್ಯಾಚಾರಕ್ಕೆ ಪ್ರತೀಕಾರ ತೀರಿಸಲು ಹಾತೊರೆಯುವ ತಾಯಿಯ ಪಾತ್ರದಲ್ಲಿ ಜನಮೆಚ್ಚುಗೆ ಪಡೆದಿದ್ದರು.

ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಂದು ಜನಿಸಿದ ಇವರ ಮೂಲ ಹೆಸರು ಶ್ರೀ ಅಮ್ಮಾ ಯಾಂಗೆರ್ ಅಯ್ಯಪ್ಪನ್. ನಾಲ್ಕನೇ ವಯಸ್ಸಿನಲ್ಲೇ ಭಕ್ತಿಚಿತ್ರ ತುನೈವನ್‌ನಲ್ಲಿ ನಟಿಸುವ ಮೂಲಕ ಶ್ರೀದೇವಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲನಟಿಯಾಗಿ ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಇದೇ ಭಾಷೆಗಳಲ್ಲಿ ಪ್ರೌಢತಾರೆಯಾಗಿಯೂ ಮಿಂಚಿದರು. ಬಾಲನಟಿಯಾಗಿ ಇವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳೆಂದರೆ, ಪೂಂಪಟ್ಟಾ (1971) ಮತ್ತು ಕಂದನ್ ಕರುಣೈ (1967).

ಹಿಂದಿ ಚಿತ್ರದಲ್ಲಿ ಮೊದಲು ಶ್ರೀದೇವಿ ಕಾಣಿಸಿಕೊಂಡಿದ್ದು ಜೂಲಿ (1975)ಯಲ್ಲಿ. ದಕ್ಷಿಣದ ಖ್ಯಾತ ತಾರೆ ಲಕ್ಷ್ಮಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಜೂಲಿಯ ತಂಗಿ ಇರೆನ್ ಆಗಿ ಈ ಚಿತ್ರದಲ್ಲಿ ನಟಿಸಿದ್ದರು. 1976ರಲ್ಲಿ ಕ.ಬಾಲಚಂದ್ರ ಅವರ ಮೂಂದ್ರು ಮುಡಿಚು ಚಿತ್ರದಲ್ಲಿ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಡರು. ಇದು ಚಿತ್ರರಂಗದಲ್ಲಿ ಹೊಸ ಶಖೆಯನ್ನು ಆರಂಭಿಸಿದ್ದು, ನಿರ್ದೇಶಕ, ಸಹ ನಟರಾದ ಕಮಲ್ ಹಾಸನ್ ಹಾಗೂ ರಜನೀಕಾಂತ್ ಈ ಚಿತ್ರದಲ್ಲಿದ್ದರು.

ವೃತ್ತಿಯ ಆರಂಭಿಕ ದಿನಗಳಲ್ಲೇ ಶ್ರೀದೇವಿಯವರ ನಟನಾ ಶಕ್ತಿ ಬೆಳಕಿಗೆ ಬಂದಿತ್ತು. ಮೂಂದ್ರು ಮುಡಿಚು ಚಿತ್ರದಲ್ಲಿ ತನ್ನ ಪ್ರಿಯತಮನನ್ನು ಖಳನಾಯಕ ಪ್ರಸಾದ್ (ರಜನೀಕಾಂತ್) ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಆತನ ತಂದೆಯನ್ನೇ ವಿವಾಹವಾಗಿದ್ದ ಸೆಲ್ವಿಯಾಗಿ ನಟನಾ ಕೌಶಲ ಮೆರೆದಿದ್ದರು.

ಶ್ರೀದೇವಿ, ಕಮಲ್‌ಹಾಸನ್ ಮತ್ತು ರಜನೀಕಾಂತ್ ಸಹಭಾಗಿತ್ವ ತಮಿಳು ಚಿತ್ರರಂಗಕ್ಕೆ ಹಲವು ಜನಪ್ರಿಯ ಚಿತ್ರಗಳನ್ನು ನೀಡಿತು. ಇವುಗಳಲ್ಲಿ ಗಾಯತ್ರಿ (1977), ಕಾವಿಕುಯಿಲ್ (1977) ಮತ್ತು ಪ್ರಿಯಾ (1978) ಪ್ರಮುಖ ಚಿತ್ರಗಳು. ಗಾಯತ್ರಿ ಚಿತ್ರದಲ್ಲಿ ರಜನೀಕಾಂತ್, ಸದ್ಗುಣಿ ಪತ್ನಿಯ ಕ್ರೂರ ಪತಿಯಾಗಿ ಅಭಿನಯಿಸಿದ್ದರು. 16 ವಯತಿನಿಲೆ ಚಿತ್ರದಲ್ಲಿ ಕಮಲ್‌ಹಾಸನ್ ಮತ್ತು ರಜನೀಕಾಂತ್ ಜತೆಗೆ ತನ್ನ ನಂಬಿಕೆಗೆ ಬದ್ಧವಾದ ಮಾಟಗಾರ್ತಿ ಮಹಿಳೆಯಾಗಿ ಜನಪ್ರಿಯತೆ ಗಳಿಸಿದ್ದರು.

ಶ್ರೀದೇವಿ- ಕಮಲ್‌ಹಾಸನ್ ಜೋಡಿ ಜನಪ್ರಿಯ ಸಿಗಪ್ಪು ರೋಜಕ್ಕಲ್ (1978)ನಂಥ ಹಲವು ಉತ್ತಮ ಚಿತ್ರಗಳಲ್ಲಿ ಮುಂದುವರಿಯಿತು. ಈ ಚಿತ್ರದಲ್ಲಿ ಹಾಸನ್ ಸರಣಿ ಹಂತಕನಾಗಿ ಹಾಗೂ ಶ್ರೀದೇವಿ ಆತನ ಪತ್ನಿಯಾಗಿ ಅಭಿನಯಿಸಿದ್ದರು. ಇದೇ ಜೋಡಿಯ ವರುಮಯ್ಯಿನ್ ನಿರಮ್ ಸಿವಪ್ಪು (1980) ನಿರುದ್ಯೋಗಿ ಪದವೀಧರ ಹಾಸನ್ ಅವರ ದಯಾಳು ಪ್ರಿಯತಮೆಯಾಗಿ ಗಮನ ಸೆಳೆದಿದ್ದರು. ಗೂಢಚರ್ಯ ಬ್ಲಾಕ್‌ಬಸ್ಟರ್ ಗುರು (1980) ಮತ್ತು ಮೀಂಡುಮ್ ಕೋಕಿಲಾ (1981) ಚಿತ್ರದಲ್ಲಿ, ನಟಿಯ ಜತೆ ಮೋಹಪರವಶನಾಗಿದ್ದ ಪತಿಯನ್ನು ಮರಳಿ ಪಡೆಯುವ ಕರ್ತವ್ಯಪ್ರಜ್ಞೆ ಹೊಂದಿದ ಪತ್ನಿಯಾಗಿ ಮಿಂಚಿದ್ದರು.

ಪುರಷಕೇಂದ್ರಿತ ಚಿತ್ರಗಳಲ್ಲಿ ಶ್ರೀದೇವಿಯ ಆತ್ಮವಿಶ್ವಾಸ ಹಾಗೂ ಸ್ವಯಂಭರವಸೆ ಇಲ್ಲಿ ಪ್ರಧಾನ ಪಾತ್ರ ವಹಿಸಿತು. ಈ ಚಿತ್ರಗಳ ಮೂಲಕ ಶ್ರೀದೇವಿ ಆತ್ಮಸಾಕ್ಷಿಯ ಧ್ವನಿಯಾಗಿ ಸ್ವಯಂ ಪ್ರಭಾವಳಿ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಬಾಲು ಮಹೇಂದ್ರ ಅವರ ಮೂಂದ್ರಮ್ ಪಿರೈ (1982) ಚಿತ್ರದಲ್ಲಿ ಭಾವನಾತ್ಮಕ ಹಿಂಜರಿತದ ಮಗು- ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದರು.

ಶ್ರೀದೇವಿ 1970 ಹಾಗೂ 80ರ ದಶಕದಲ್ಲಿ ಮಲೆಯಾಳಂ, ತೆಲುಗು ಮತ್ತು ಕನ್ನಡ ಚಿತ್ರದಲ್ಲೂ ಪ್ರತಿಭೆ ಮೆರೆದರು. ಈ ದಶಕಗಳಲ್ಲಿ ಅತ್ಯಂತ ಕಠಿಣ ಪರಿಶ್ರಮ ವಹಿಸುತ್ತಿದ್ದ ನಟಿ ಎಂಬ ಹೆಸರು ಗಳಿಸಿದ್ದರು. ತೆಲುಗು ದಂತಕಥೆ ಎನ್.ಟಿ.ರಾಮರಾವ್ ಜತೆ ವೆಟೆಗಾಡು (1979), ಸರ್ದಾರ್ ಪಾಪ ರಾಯುಡು (1980) ಹಾಗೂ ಜಸ್ವಿಸ್ ಚೌಧರಿ (1982) ಚಿತ್ರದಲ್ಲಿ ಮಿಂಚಿದರು. ಈ ಮಧ್ಯೆ ಸೊಲ್ವಾ ಸಾವನ್ ಚಿತ್ರದ ಮೂಲಕ 1979ರಲ್ಲಿ ಹಿಂದಿ ಚಿತ್ರರಂಗಕ್ಕೂ ಲಗ್ಗೆ ಇಟ್ಟರು.

ಬಾಲು ಮಹೇಂದ್ರ ಅವರ ಮೂಂದ್ರಮ್ ಪಿರೈ ರಿಮೇಲ್ ಚಿತ್ರವಾದ ಸದ್ಮಾ ಹಾಗೂ ಹಿಮ್ಮತ್‌ವಾಲಾ ಚಿತ್ರದ ಮೂಲಕ 1983 ಶ್ರೀದೇವಿಯವರ ನಟನಾ ಸಾಮರ್ಥ್ಯದ ಎರಡು ಭಿನ್ನ ಧ್ರುವಗಳು ಪರಿಚಯವಾದವು. ಸದ್ಮಾ ಚಿತ್ರದ ಮೂಲಕ ಹೊಗಳಿಕೆ ಗಳಿಸಿದರೆ, ಹಿಮ್ಮತ್‌ವಾಲಾ ಮೂಲಕ ಸ್ಟಾರ್‌ ಪಟ್ಟ ಗಳಿಸಿದರು. ದಕ್ಷಿಣ ಭಾರತದಲ್ಲಿ ಸುದ್ದಿ ಮಾಡಿದ ಈ ಚಿತ್ರದಲ್ಲಿ ಜಿತೇಂದ್ರ ಜತೆ ಶ್ರೀದೇವಿ ನಟಿಸಿದರು. ಮವಾಲಿ (1983), ಇನ್ಕ್ವಿಲಾಬ್ (1984) ಹಾಗೂ ತೋಹ್ಫಾ (1984)ನಂಥ ಚಿತ್ರಗಳ ಯಶಸ್ಸಿನೊಂದಿದೆ ದಕ್ಷಿಣದ ಯಶಸ್ಸಿನ ಅಲೆ ಶ್ರೀದೇವಿಯವರನ್ನು ಹಿಂದಿ ಸಿನಿಮಾದ ಅಗ್ರಗಣ್ಯ ನಟರ ಜತೆ ಹೋಲಿಕೆ ಮಾಡುವಂತಾಯಿತು.

ಶ್ರೀದೇವಿ ಅವರನ್ನು ಗ್ಲಾಮರಸ್ ಗಂಡುಬೀರಿ ಎಂದು ಬಿಂಬಿಸಿದರೂ, ಅವರ ನಟನೆ ಮತ್ತು ನೃತ್ಯ ಕೌಶಲ ಹಿಂದಿ ಚಿತ್ರರಸಿಕರನ್ನು ಬಹುಬೇಗ ಸೆಳೆಯಿತು. ಹರ್ಮೇಶ್ ಮಲ್ಹೋತ್ರಾ ಅವರ ಬ್ಲಾಕ್‌ಬಸ್ಟರ್ ನಗೀನಾ (1986) ಚಿತ್ರದೊಂದಿಗೆ ಬಾಲಿವುಡ್‌ನ ನಂಬರ್ ವನ್ ತಾರೆ ಪಟ್ಟಕ್ಕೇರಿದರು. ಮನುಷ್ಯರೂಪಿ ಹಾವು ಎಂಬಂತೆ ಮೈಮಾಟ ಮೆರೆದ ಶ್ರಿದೇವಿ ರಿಷಿ ಕಪೂರ್ ಅವರಂಥ ಅಗ್ರಗಣ್ಯ ನಟರನ್ನೂ ತೆರೆಯ ಮೇಲೆ ಹಿಂದಿಕ್ಕಿದರು.

ಚಿತ್ರರಂಗದ ಏಳುಬೀಳುಗಳ ನಡುವೆ ಶ್ರೀದೇವಿ ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದರು. ಶೇಖರ್ ಕಪೂರ್ ಅವರ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು. ಛಿದ್ರಮನಸ್ಕ ವರದಿಗಾರ್ತಿಯಾಗಿ ಗೂಢಚರ್ಯನೊಬ್ಬನ ಮೋಹಪಾಶದಲ್ಲಿ ಸಿಲುಕುವ ಕಥಾನಕದಲ್ಲಿ ಮನೋಜ್ಞ ಅಭಿನಯ ನೀಡಿದರು. ಇದು ಶ್ರೀದೇವಿಯ ನಾಟಕದ ಹಿನ್ನೆಲೆ, ಕಾಮಿಡಿ (ಚಾರ್ಲಿ ಚಾಪ್ಲಿನ್‌ನ ಅನುಕರಣೆ), ನೃತ್ಯ ಮತ್ತು ಮನೋಜ್ಞತೆಯನ್ನು ಒಳಗೊಂಡಿತ್ತು. ಹಿಂದಿ ಚಿತ್ರಜಗತ್ತು ಇವರನ್ನು ಮಿಸ್ ಇಂಡಿಯಾ ಎಂದು ಕರೆಯುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದರು.

1989ರಲ್ಲಿ ತ್ರಿಕೋನ ಪ್ರೇಮದ ಚಾಂದ್‌ನಿ ಚಿತ್ರದ ಮೂಲಕ ಯಶ್ ಚೋಪ್ತಾ, ಶ್ರೀದೇವಿಯರ ಇಮೇಜ್‌ನ ಮರುಶೋಧ ನಡೆಸಿದರು. ಅದ್ಭುತ ಕಲ್ಪನೆಯ ಚೋಪ್ರಾ, ಮೊದಲ ಪ್ರೇಮ (ರಿಶಿ ಕಪೂರ್)ವನ್ನು ಕಳೆದುಕೊಂಡು ವಿಧಿ ಹಸ್ತಕ್ಷೇಪ ಮಾಡುವ ಮುನ್ನ ಮತ್ತೊಬ್ಬ (ವಿನೋದ್ ಖನ್ನಾ)ನ ಪ್ರೇಮಪಾಶಕ್ಕೆ ಬೀಳುವ ಮಹಿಳೆಯ ಕಲ್ಪನೆಯನ್ನು ಶ್ರೀದೇವಿಯ ಮೂಲಕ ಸಾಕ್ಷಾತ್ಕರಿಸಿದರು.

"ಯಶ್ ಚೋಪ್ರಾ ಫಿಪ್ಟಿ ಈಯರ್ಸ್‌ ಆಫ್ ಸಿನಿಮಾ" ಕೃತಿಯಲ್ಲಿ ಈ ನಿರ್ದೇಶಕ ಬ್ರಿಟಿಷ್ ಚಿತ್ರಚಿಂತಕ ರಚೆಲ್ ದ್ವಾಯೆರ್ ಬಳಿ ಹೇಳಿದಂತೆ, ಈ ಚಿತ್ರಕ್ಕೆ ರೇಖಾ ಅವರನ್ನು ಬಳಸಲು ನಿರ್ಧರಿಸಿದ್ದರು. ಆದರೆ ಶ್ರೀದೇವಿ ಜತೆ ಕೆಲಸ ಮಾಡಲು ಇಷ್ಟ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದರು.

"ನೀವು ಏನು ಮಾಡಬೇಕು ಎಂದು ಕೊಂಡಿದ್ದೀರೋ ಅದನ್ನು ಸಾಧಿಸಿ" ಎಂದು ಶ್ರೀದೇವಿ ಹೇಳಿದ್ದರು. "ಇದರಿಂದ ನಾವು ಹೊಸ ಲುಕ್ ತಂದುಕೊಟ್ಟೆವು. ಆಭರಣ, ಕೇಶಾಲಂಕಾರ, ಪ್ರಸಾದನ ಹೀಗೆ ಆಕೆ ಅದ್ಭುತ ನಟಿ. ಆಕೆ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಿದಳು. ಚಾಂದನಿ ಚಿತ್ರದಲ್ಲಿ ಆಕೆಯೊಂದಿಗೆ ಮೊದಲ ದಿನ ಕೆಲಸ ಮಾಡುವಾಗಲೇ ಅದನ್ನು ನಾನು ಗಮನಿಸಿದೆ. ಆಕೆ ಒಂದು ಹೆಜ್ಜೆ ಮುಂದೆ ಹೋದಳು. ಆಕೆ ಏನು ಮಾಡುತ್ತಿದ್ದಾಳೆ ಎಂದೇ ತಿಳಿಯುತ್ತಿರಲಿಲ್ಲ. ಆಕೆಗೆ ಭಾಷೆ ಬರುತ್ತಿರಲಿಲ್ಲ. ಸಹಾಯಕ ಆಕೆಗೆ ಸಂಭಾಷಣೆ ಹೇಳುತ್ತಿದ್ದ. ಆದರೆ ಪ್ರಯಿ ನೃತ್ಯಕ್ಕೆ, ಭಾವನೆಗೆ ಆಕೆ ಒಂದಷ್ಟು ಹೆಚ್ಚಿನ ಜೀವಂತಿಗೆ ತುಂಬುತ್ತಿದ್ದಳು"

ಚೋಪ್ರಾ ಜತೆಗಿನ ಶ್ರೀದೇವಿಯ ಇತರ ಚಿತ್ರಗಳಾದ ಲಮ್ಹೆ (1991) ಚಾಂದನಿಯಷ್ಟು ಜನಪ್ರಿಯತೆ ಗಳಿಸಲಿಲ್ಲ. ಶ್ರೀದೇವಿ ಇದರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವೀರನ್ (ಅನಿಲ್ ಕಪೂರ್) ಅನ್ನು ಪ್ರೀತಿಸುತ್ತಿದ್ದ ಮಹಿಳೆಯಾಗಿ ಹಾಗೂ ವೀರನ್‌ನನ್ನು ಪ್ರೀತಿಸುತ್ತಿದ್ದ ಆಕೆಯ ಮಗಳಾಗಿ ನಟಿಸಿದ್ದರು. ಈ ಚಿತ್ರದ ವೈಫಲ್ಯದ ಹೊರತಾಗಿಯೂ, ಶ್ರೀದೇವಿಯನ್ನು ನಟನೆಯ ಪವರ್‌ಹೌಸ್ ಆಗಿ ಈ ಚಿತ್ರ ಬಿಂಬಿಸಿತು. ಈ ಚಿತ್ರವನ್ನು ಹಾಗೂ ಸಿಲ್‌ಸಿಲಾ ಚಿತ್ರವನ್ನು ಚೋಪ್ರಾ ತಮ್ಮ ನಿರ್ದೇಶನದ ಅತ್ಯುತ್ತಮ ಚಿತ್ರಗಳೆಂದು ಪರಿಗಣಿಸಿದ್ದರು.

1989ರಲ್ಲಿ ಶ್ರೀದೇವಿಯ ತಾರಾಪಟ್ಟ ಅತ್ಯುನ್ನತ ಶಿಖರಕ್ಕೇರಿತ್ತು. ಚಾಂದ್‌ನಿ ಮತ್ತು ಗುರು ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಜತೆ ನಟಿಸಿದ್ದರು. (ಮಿಥುನ್ ಜತೆ ಶ್ರೀದೇವಿ ರಹಸ್ಯ ವಿವಾಹವಾಗಿದ್ದರು ಎಂಬ ಗುಲ್ಲೆದ್ದಿತ್ತು). ಜತೆಗೆ ಆಕೆಯ ಅತ್ಯುತ್ತಮ ಚಿತ್ರ ಎನಿಸಿದ ಛಾಲ್‌ಬಾರ್ ಚಿತ್ರವೂ ಈ ವರ್ಷ ತೆರೆಕಂಡಿತು. ಹುಟ್ಟಿನಲ್ಲೇ ಬೇರ್ಪಟ್ಟಿದ್ದ ಅವಳಿಗಳು, ಪ್ರೌಢಾವಸ್ಥೆಯಲ್ಲಿ ವಿನಿಮಯವಾಗುವ ಪಂಕಜ್ ಪರಾಶರ್ ಅವರ ಈ ವಿಭಿನ್ನ ಚಿತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ರಜನಿಕಾಂತ್ ಇದ್ದರೂ, ಶ್ರೀದೇವಿ ಪ್ರಮುಖ ಆಕರ್ಷಣೆಯಾಗಿದ್ದರು.

1992ರಲ್ಲಿ ಶ್ರೀದೇವಿ ಹಾಗೂ ಅಮಿತಾಭ್ ಬಚ್ಚನ್ ಅವರು ಮುಕುಲ್ ಆನಂದ್ ಅವರ ಖುದಾ ಗವ್ಹಾ ಚಿತ್ರದ ಮೂಲಕ ಮತ್ತೆ ಒಂದಾದರು. ಇದು ಅಪ್ಘಾನಿಸ್ತಾನ ಹಾಗೂ ಭಾರತದಲ್ಲಿ ಚಿತ್ರೀಕರಣಗೊಂಡ ವಿಶಿಷ್ಟ ಚಿತ್ರ. ಇಲ್ಲಿ ಶ್ರೀದೇವಿ ಮತ್ತೆ ರೌದ್ರರೂಪದ ತಾಯಿಯಾಗಿ ಮತ್ತು ಅಷ್ಟೇ ಭಾವತೀವ್ರತೆಯ ಮಗಳಾಗಿ ಹೀಗೆ ದ್ವಿಪಾತ್ರದಲ್ಲಿ ಮಿಂಚಿದರು.

ಭಾವಿ ಪತಿ ಬೋನಿ ಕಪೂರ್ ನಿರ್ಮಿಸಿದ ರೂಪ್ ಕಿ ರಾನಿ ಚೋರೋಂ ಕಾ ರಾಜಾ (1993) ಫ್ಲಾಪ್ ಚಿತ್ರ. ಶ್ರೀದೇವಿಯವರ ತಾರಾಪಟ್ಟ ಕೂಡಾ ನಿಷ್ಪ್ರಯೋಜಕವಾಯಿತು. ನೃತ್ಯಶೈಲಿಯಲ್ಲಿ ಶ್ರೀದೇವಿಗೆ ಸರಿಸಾಟಿ ಎನಿಸಿದ ಮಾಧುರಿ ದೀಕ್ಷಿತ್ ತೆರೆಯನ್ನು ಆಕ್ರಮಿಸಿಕೊಂಡರು. ಲಾಡ್ಲಾ (1994) ಮತ್ತು ಜುಡಾಯಿ (1997) ಹಿಟ್ ಚಿತ್ರಗಳಾದರೂ, 1996ರಲ್ಲಿ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ, ಮೂರು ದಶಕಗಳ ಕಾಲ ಭಾರತ ಚಿತ್ರರಂಗ ವನ್ನು ಆಳಿದ ಶ್ರೀದೇವಿ ತೆರೆಯ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು. ( ಮೇರಿ ಬೀವಿ ಕಾ ಜವಾಬದ್ ನಹೀ ಚಿತ್ರ 10 ವರ್ಷ ವಿಳಂಬದ ಬಳಿಕ 2004ರಲ್ಲಿ ಬಿಡುಗಡೆಯಾಯಿತು).

2012ರಲ್ಲಿ ಗೌರಿ ಶಿಂಧೆಯವರ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಮತ್ತೆ ಶ್ರೀದೇವಿ ಅದ್ದೂರಿ ಪುನರಾಗಮನವಾಯಿತು. ನ್ಯೂಯಾರ್ಕ್ ಭೇಟಿ ಸಂದರ್ಭ ದಲ್ಲಿ ಸಂಕೋಚದ ಮುದ್ದೆಯಾದ ಪತ್ನಿ ಇಂಗ್ಲಿಷ್ ಸಂಭಾಷಣೆ ಕ್ಲಾಸ್‌ಗೆ ಸೇರುವ ಕಥಾನಕ ಹೊಂದಿದ ಚಿತ್ರ ಇದು. ಶಶಿ ಗೋಡ್‌ಬೋಲೆ ಹೇಳಿದಂತೆ ನಿಜ ಬದುಕಿನಲ್ಲಿ ಶ್ರೀದೇವಿಯವರ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ ಅದು. ಶ್ರೀದೇವಿ ತಮಿಳು ಚಿತ್ರ ’ಪುಲಿ’ಯಲ್ಲಿ ಕೂಡಾ ನಟಿಸಿದರು. ಆದರೆ 2017ರಲ್ಲಿ ಮತ್ತೆ ರವಿ ಉದ್ಯಾವರ್ ಅವರ ಸೇಡಿನ ಕಥೆ ಹೊಂದಿದ್ದ ಮಾಮ್ ಚಿತ್ರದಲ್ಲಿ ಮತ್ತೆ ಸದ್ದು ಮಾಡಿದರು. ಆನಂದ್ ಎಲ್.ರೈ ಅವರ ತೆರೆ ಕಾಣಲಿರುವ ಝೀರೊ ಚಿತ್ರದಲ್ಲಿ ಕೂಡಾ ಶ್ರೀದೇವಿ ನಟಿಸಿದ್ದಾರೆ ಎನ್ನಲಾಗಿದೆ. ಶಾರೂಖ್ ಖಾನ್ ಈ ಚಿತ್ರದ ನಾಯಕ ನಟ.

ಶ್ರೀದೇವಿ ಸಂದರ್ಶನ ನೀಡುವುದು ವಿರಳ. ಮಿಥುನ್ ಚಕ್ರವರ್ತಿ ಜತೆಗಿನ ಅಫೇರ್ ಬಗ್ಗೆ ಮತ್ತು ಬೋನಿ ಕಪೂರ್ ಜತೆಗಿನ ಸಂಬಂಧದ ಬಗ್ಗೆ ಧೀರ್ಘಕಾಲ ಹರಿದಾಡುತ್ತಿದ್ದ ಗಾಸಿಪ್‌ಗಳಿಂದಲೂ ದೂರ ಇದ್ದವರು. ಬೋನಿ ತಮ್ಮ ಪತ್ನಿಯನ್ನು ಬಿಟ್ಟು ಶ್ರೀದೇವಿಯವರನ್ನು ವಿವಾಹವಾಗಿದ್ದರು. ಶ್ರೀದೇವಿ ಆಶು ನಟಿ ಹಾಗೂ ವಿಧೇಯ ನಟಿ ಎಂಬ ಹೆಸರು ಪಡೆದಿದ್ದರು. ಈಕೆಗೆ ಅಪೇಕ್ಷಿತ ಅಭಿವ್ಯಕ್ತಿಗಾಗಿ ಕೆಲವೇ ಟೇಕ್‌ಗಳು ಸಾಕಾಗುತ್ತಿತ್ತು. ಸೆಟ್‌ನಲ್ಲಿ ವೃತ್ತಿಪರ ನಟಿ ಎನಿಸಿಕೊಂಡಿದ್ದ ಶ್ರೀದೇವಿ, ನಿರ್ದೇಶಕರ ಅನುಜ್ಞೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು.

ಅಪರೂಪಕ್ಕೆ ಎಂಬಂತೆ ಫಿಲಂಫೇರ್‌ಗೆ ನೀಡಿದ್ದ ಸಂದರ್ಶನದಲ್ಲಿ ಚಿತ್ರರಂಗದ ವೃತ್ತಿಗಾಗಿ ಶಿಕ್ಷಣ ಕಳೆದುಕೊಂಡ ಬಗ್ಗೆ ಬೇಸರಿಸಿದ್ದರು. "ನಾನು ಒಳ್ಳೆಯ ವಿದ್ಯಾರ್ಥಿನಿಯಾಗಿದ್ದೆ. ನನ್ನ ಪೋಷಕರು ನನ್ನನ್ನು ಶಾಲೆ ಮತ್ತು ಚಿತ್ರ ಎರಡರ ನಡುವೆಯೂ ಏಕಕಾಲಕ್ಕೆ ತೊಡಗಿಸಿಕೊಳ್ಳುವಂತೆ ಬೆಳೆಸಿದರು. ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ, ಶಿಕ್ಷಕರೂ ಜತೆಗೆ ಬರುತ್ತಿದ್ದರು. ಆದರೆ ಒಂದು ಹಂತದ ಬಳಿಕ ಅದು ಕಾರ್ಯಸಾಧು ಎನಿಸಲಿಲ್ಲ. ಅಧ್ಯಯನ ಹಾಗೂ ಚಿತ್ರಗಳ ನಡುವೆ ನಾನು ಆಯ್ಕೆ ಮಾಡಿಕೊಳ್ಳಲೇಬೇಕಾಯಿತು. ನಾನು ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ"

ಶ್ರೀದೇವಿ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಗಳಿಸಿದರು. ತಮ್ಮ ವೃತ್ತಿ ಬದುಕಿನಲ್ಲಿ ಅಸಂಖ್ಯಾತ ಪ್ರಶಸ್ತಿ ಪುರಸ್ಕಾರಗಳನ್ನು ಗೆದ್ದ ಅವರ ನೃತ್ಯಗಳಲ್ಲಿ ಬಹುತೇಕ ನೃತ್ಯಗಳನ್ನು ಸರೋಜ್ ಖಾನ್ ಕೊರಿಯೊಗ್ರಫಿ ಮಾಡಿದ್ದಾರೆ. ಇದು 1980ರ ದಶಕದ, ನಿಜ ಅರ್ಥದಲ್ಲಿ ಶ್ರೀದೇವಿ ನಂಬರ್ ವನ್ ತಾರೆಯಾಗಿದ್ದ ಅವಧಿಯ ಸಾಂಸ್ಕೃತಿಕ ಹೆಗ್ಗುರುತುಗಳು ಎನಿಸಿಕೊಂಡಿವೆ.

ಮೀರಾ ನಾಯರ್ ಅವರ ಸಲಾಂ ಬಾಂಬೆ (1988) ಚಿತ್ರದಲ್ಲಿನ ವೇಶ್ಯಾಗೃಹದಲ್ಲಿನ ಪುಟ್ಟ ಬಾಲಕಿಯಾಗಿ ಮಾಡಿದ ನೃತ್ಯದಿಂದ ಹಿಡಿದು, ಮಿಸ್ಟರ್ ಇಂಡಿಯಾದ ಹವಾ ಹವಾಯಿ ವರೆಗೆ ಹಲವಾರು ನೃತ್ಯಗಳು ಚಿತ್ರರಸಿಕರ ಮನಸ್ಸಿನಲ್ಲಿ ಸದಾ ಉಳಿಯುವಂಥವು. ಸಚಿನ್ ಕುಂದಲ್ಕರ್ ಅವರ ಅಯ್ಯಿ (2012), ರಾಣಿ ಮುಖರ್ಜಿಯವರ ಕ್ರೇಝಿ ಕ್ಯಾರೆಕ್ಟರ್ ಚಿತ್ರದಲ್ಲಿನ ಆಕರ್ಷಕ ಕಾಥೆ ನಹಿ ಕಟ್ ತೆ ನೃತ್ಯಗಳು ಮಿಸ್ಟರ್ ಇಂಡಿಯಾ ಚಿತ್ರನೃತ್ಯಗಳು. ತುಮ್ಹಾರಿ ಸುಲು (2017) ನೃತ್ಯ ಶ್ರೀದೇವಿಯವರ ಹವಾ ಹವಾಯಿ ನೃತ್ಯದ ಮರುಸೃಷ್ಟಿಯಾಗಿದ್ದು, ಇವೆಲ್ಲವೂ ಶ್ರೀದೇವಿಯವರ ನಾಟ್ಯ ಕೌಶಲಕ್ಕೆ ಸಂದ ಗೌರವಗಳು.

ಶ್ರೀದೇವಿಯವರ ಇತ್ತೀಚಿನ ವರ್ಷಗಳಲ್ಲಿ ಅವರ ಬಹುತೇಕ ಸಂದರ್ಶನಗಳು ಅವರ ಹೆಣ್ಣುಮಕ್ಕಳ ಬಗ್ಗೆ ಕೇಂದ್ರೀಕೃತವಾಗಿದ್ದವು. ಜಾಹ್ನವಿ ಕಪೂರ್ ಮುಂದಿನ ಜುಲೈನಲ್ಲಿ ಧಾದಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮಾಮ್ ಚಿತ್ರದ ಪ್ರಚಾರದ ವೇಳೆ ಸ್ಕ್ರೋಲ್.ಇನ್ ಜತೆಗಿನ ಸಂವಾದದಲ್ಲಿ "ನನ್ನ ಹೆಣ್ಣುಮಕ್ಕಳು, ನಾನು ಅವರ ವಯಸ್ಸಿನಲ್ಲಿ ನನ್ನ ತಾಯಿಯ ಜತೆ ಹೇಗಿದ್ದೆನೋ ಹಾಗೆ ಇರಬೇಕು ಎಂದು ನಾನು ಬಯಸುವುದಿಲ್ಲ. ನನ್ನ ಪುತ್ರಿಯರು ಕೆಲ ಮೌಲ್ಯ ಮತ್ತು ನೈತಿಕತೆಯೊಂದಿಗೆ ಬೆಳೆದಿದ್ದಾರೆ. ಎಲ್ಲಿ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಅವರಿಗೆ ತಿಳಿದಿದೆ. ನಾನು ಕೂಲ್ ಮಾಮ್.  ಆದರೆ ಎನ್ನುವುದು ಯಾವಾಗಲೂ ಇದ್ದೇ ಇರುತ್ತದೆ. ಹೌದು ಹಲವು ವೃತ್ತಿಪರ ವ್ಯವಸ್ಥಾಪಕರು, ತಂತ್ರಜ್ಞರು ಹಾಗೂ ಚಿತ್ರ ನಿರ್ಮಾಪಕರು ಇರುತ್ತಾರೆ. ಆದರೆ ಕಠಿಣ ಪರಿಶ್ರಮಕ್ಕೆ ಯಾರೂ ಪರ್ಯಾಯವಾಗಲಾರರು. ಜಾಹ್ನವಿ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ. ಅದೃಷ್ಟವನ್ನು ಕೂಡಾ. ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದು ನನ್ನ ಮಕ್ಕಳಿಗೆ ಗೊತ್ತು. ಎಲ್ಲಿ ಅಂತರ ಕಾಯ್ದುಕೊಳ್ಳಬೇಕು ಎನ್ನುವುದೂ ಗೊತ್ತು" ಎಂದು ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News