ತ್ರಿಕೋನ ಟ್ವೆಂಟಿ -20 ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಕೊಹ್ಲಿ, ಧೋನಿಗೆ ವಿಶ್ರಾಂತಿ

Update: 2018-02-25 10:27 GMT

  ಮುಂಬೈ, ಫೆ.25: ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟ್ವೆಂಟಿ -20ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಉಪನಾಯಕ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಕ್ಕೆ ಸುದೀರ್ಘ ಪ್ರವಾಸದ ಬಳಿಕ ಬಿಸಿಸಿಐ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಶ್ರೀಲಂಕಾ ವಿರುದ್ಧದ ತ್ರಿಕೋನ ಏಕದಿನ ಸರಣಿಗೆ ವಿಶ್ರಾಂತಿ ನೀಡುವ ನಿರ್ಧಾರ ಕೈಗೊಂಡಿದೆ.

 ಮಾ.6ರಿಂದ 18ರ ತನಕ ಶ್ರೀಲಂಕಾದಲ್ಲಿ ನಡೆಯಲಿರುವ ನಿದಾಸ್ ಟ್ರೋಫಿ ತ್ರಿಕೋನ ಸರಣಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ.

ತ್ರಿಕೋನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ನಾಯಕರಾಗಿ ಮತ್ತು ಶಿಖರ್ ಧವನ್ ಉಪನಾಯಕರಾಗಿ ಮುನ್ನಡೆಸುವರು.

ಸರಣಿಯಲ್ಲಿ ಧೋನಿ, ವಿರಾಟ್ ಕೊಹ್ಲಿ ಅವರೊಂದಿಗೆ ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಕುಲ್‌ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್, ರಿಷಭ್ ಪಂತ್, ದೀಪಕ್ ಹೂಡಾ, ಮತ್ತು ಮುಹಮ್ಮದ್ ಸಿರಾಜ್ 15 ಮಂದಿಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 ಕಳೆದ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಂಡು 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತ್ತು.

‘‘ ಈಗಾಗಲೇ ಮುಗಿರುವ ಸರಣಿ ಮತ್ತು ಮುಂಬರುವ ಮಹತ್ವದ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ’’ ಎಂದು ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಎ. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ‘‘ಎಂಎಸ್ ಧೋನಿ ಅವರು ಲಭ್ಯರಿಲ್ಲ. ಅವರ ಮನವಿ ಮೇರೆಗೆ ಶ್ರೀಲಂಕಾ ಪ್ರವಾಸ ಸರಣಿಗೆ ವಿಶ್ರಾಂತಿ ನೀಡಲಾಗಿದೆ ’’ ಎಂದು ಪ್ರಸಾದ್ ಹೇಳಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಮಯಾಂಕ್ ಅಗರವಾಲ್ ಅವರನ್ನು ತಂಡದ ಆಯ್ಕೆ ವೇಳೆ ಪರಿಗಣಿಸಲಾಗಿಲ್ಲ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ರಾಷ್ಟ್ರೀಯ ತಂಡ ಪ್ರವೇಶಿಸಬೇಕಾದರೆ ಭಾರತ ‘ಎ’ ತಂಡದಲ್ಲಿ ಆಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಬೇಕಾಗಿದೆ ಎಂದು ಬಿಸಿಸಿಐ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್ (ಉಪನಾಯಕ), ಲೋಕೇಶ್ ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದುಲ್ ಠಾಕೂರ್, ಜೈದೇವ್ ಉನದ್ಕಟ್, ಮುಹಮ್ಮದ್ ಸಿರಾಜ್, ರಿಷಭ್ ಪಂತ್ (ವಿಕೆಟ್ ಕೀಪರ್).

ತ್ರಿಕೋನ ಟ್ವೆಂಟಿ -20ಸರಣಿಯ ವೇಳಾಪಟ್ಟಿ

 ದಿನಾಂಕ        ಪಂದ್ಯ              ಸ್ಥಳ               ಸಮಯ

ಮಾ.06  ಭಾರತ-ಶ್ರೀಲಂಕಾ      ಕೊಲಂಬೊ     ರಾತ್ರಿ 7 ಗಂಟೆಗೆ

ಮಾ.08   ಭಾರತ-ಬಾಂಗ್ಲಾದೇಶ ಕೊಲಂಬೊ    ರಾತ್ರಿ 7 ಗಂಟೆಗೆ

ಮಾ.10  ಶ್ರೀಲಂಕಾ -ಬಾಂಗ್ಲಾ  ಕೊಲಂಬೊ     ರಾತ್ರಿ 7 ಗಂಟೆಗೆ

ಮಾ.12  ಶ್ರೀಲಂಕಾ-ಭಾರತ    ಕೊಲಂಬೊ     ರಾತ್ರಿ 7 ಗಂಟೆಗೆ

ಮಾ.14   ಬಾಂಗ್ಲಾ-ಭಾರತ      ಕೊಲಂಬೊ    ರಾತ್ರಿ 7 ಗಂಟೆಗೆ

ಮಾ.16   ಶ್ರೀಲಂಕಾ-ಬಾಂಗ್ಲಾ  ಕೊಲಂಬೊ     ರಾತ್ರಿ 7 ಗಂಟೆಗೆ

ಮಾ.18   ಫೈನಲ್                                   ರಾತ್ರಿ 7 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News