5ಜಿ ಮೊಬೈಲ್ ತಂತ್ರಜ್ಞಾನದ ಬಗ್ಗೆ ಎಲ್ಲರಿಗೂ ಥ್ರಿಲ್ ಆಗಿರುವಾಗ ಜೂಹಿ ಚಾವ್ಲಾ ಕಳವಳಗೊಂಡಿರುವುದೇಕೆ?

Update: 2018-02-26 03:49 GMT

ಮುಂಬೈ, ಫೆ.26: ಮಾನವ ಆರೋಗ್ಯದ ಮೇಲೆ ರೇಡಿಯೊ ಫ್ರೀಕ್ವೆನ್ಸಿಯ ವಿಕಿರಣದಿಂದ ಆಗುವ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ಲೇಷಿಸಿದೇ 5ಜಿ ಮೊಬೈಲ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಬಾರದು ಎಂದು ಖ್ಯಾತ ಬಾಲಿವುಡ್ ನಟಿ ಮತ್ತು ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ ಜೂಹಿ ಚಾವ್ಲಾ ಆಗ್ರಹಿಸಿದ್ದಾರೆ.

ಡಿಜಿಟಲ್ ಇಂಡಿಯಾ ಗುರಿ ಸಾಧನೆ ನಿಟ್ಟಿನಲ್ಲಿ 5ಜಿ ಅನುಷ್ಠಾನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಹೊಸ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಸಂಶೋಧನೆ ಕೈಗೊಂಡಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿರುವ ಚಾವ್ಲಾ, ಮೊಬೈಲ್ ಟವರ್ ಆಂಟೆನಾಗಳಿಂದ ಹಾಗೂ ವೈ ಫೈ ಹಾಟ್‌ಸ್ಪಾಟ್‌ಗಳ ಎಲೆಕ್ಟ್ರೋ ಮ್ಯಾಗ್ನಟಿಕ್ ರೇಡಿಯೇಷನ್ (ಇಎಂಎಫ್) ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ.

"ಹಲವು ಮಂದಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಜ್ಞಾನಿಗಳು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು, ಮಾನವ ಆರೋಗ್ಯದ ಮೇಲೆ ರೇಡಿಯೊಫ್ರೀಕ್ವೆನ್ಸಿ ವಿಕಿರಣದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

"ಸಿಟಿಝನ್ ಫಾರ್ ಟುಮಾರೊ’ ಆಂದೋಲನ ಹಮ್ಮಿಕೊಂಡಿರುವ ಬಾಲಿವುಡ್ ನಟಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಗುರಿಸಾಧನೆಯ ಸಲುವಾಗಿ 5ಜಿ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತರುವ ಅಂಧ ನಿರ್ಧಾರ ಕೈಗೊಂಡಿದೆ ಎಂದು ಅವರು ಟೀಕಿಸಿದ್ದಾರೆ. ಉತ್ತಮ ಇಮಟರ್‌ನೆಟ್ ವೇಗ ಮತ್ತು ನೆಟ್‌ವರ್ಕ್ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ 5ಜಿ ಸ್ಥಾಪನೆಗೆ ಮುಂದಾಗಿದೆ. ಆದರೆ ಅದರ ವ್ಯತಿರಿಕ್ತ ಪರಿಣಾಮವನ್ನು ಮರೆತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News