ಬೆಂಗಳೂರು: ಟಗರು ಚಲನಚಿತ್ರದ ಅಶ್ಲೀಲ ಸಂಭಾಷಣೆ ಮ್ಯೂಟ್ ಮಾಡಲು ಒತ್ತಾಯ

Update: 2018-02-26 14:12 GMT

ಬೆಂಗಳೂರು, ಫೆ.26: ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ‘ಟಗರು’ ಚಲನಚಿತ್ರದ ನಾಯಕ ಡಾ.ಶಿವರಾಜ್ ಕುಮಾರ್ ಅವರಿಗೆ ಅವಮಾನವಾಗುವ ರೀತಿಯಲ್ಲಿರುವ ಅಶ್ಲೀಲ ಸಂಭಾಷಣೆಗಳನ್ನು ‘ಮ್ಯೂಟ್’ ಮಾಡಬೇಕೆಂದು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಸೇನಾ ಸಮಿತಿ ಒತ್ತಾಯಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಎಸ್.ಕುಮಾರಸ್ವಾಮಿ, 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಡಾ.ಶಿವರಾಜ್ ಕುಮಾರ್ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಟಗರು ಚಿತ್ರದಲ್ಲಿ ಖಳನಾಯಕರು ಅಶ್ಲೀಲ ಪದ ಬಳಸಿ ನಿಂದಿಸುವ ಸನ್ನಿವೇಶ ಅತಿರೇಕವಾಗಿದ್ದು, ಇದರಿಂದ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಹೀಗಾಗಿ ಈ ಕೂಡಲೇ ಟಗರು ಚಿತ್ರದಲ್ಲಿ ಬಳಸಿರುವ ಅಶ್ಲೀಲ ಸಂಭಾಷಣೆಗಳನ್ನು ಮ್ಯೂಟ್ ಮಾಡಬೇಕು. ಅಲ್ಲದೇ, ಟಗರು ಚಲನಚಿತ್ರದ ನಿರ್ದೇಶಕ ಸೂರಿ ಬಹಿರಂಗವಾಗಿ ಕ್ಷಮೆಯಾಚಿಸ ಬೇಕೆಂದು ಆಗ್ರಹಿಸಿದರು.

ಟಗರು ಚಿತ್ರದ ನಿರ್ದೇಶಕ ಸೂರಿ ಕ್ಷಮೆಕೇಳದಿದ್ದಲ್ಲಿ ಅವರ ನಿರ್ದೇಶನದ ಎಲ್ಲ ಚಿತ್ರಗಳನ್ನು ಬಹಿಷ್ಕರಿಸಿ, ಚಿತ್ರರಂಗದಿಂದ ವಜಾ ಮಾಡಲು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್.ಬಿ. ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News