ಬೆಂಗಳೂರು: ಡಾ.ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ
•ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್
•ಯೋಗಶಾಲೆ
•ಮಲ್ಟಿ ಜಿಮ್ (ಎಲ್ಲ ವಯೋಮಾನದವರಿಗೆ)
•ಮಸಾಜ್ ಕೇಂದ್ರ(ಹಿರಿಯ ನಾಗರಿಕರಿಗೆ)
•400 ಆಸನವುಳ್ಳ ಸಭಾಂಗಣ.
ಬೆಂಗಳೂರು, ಫೆ. 26: ನಗರದಾದ್ಯಂತ ಹಲವಾರು ಕಾಮಗಾರಿಗಳು ಪ್ರತಿಯಲ್ಲಿದ್ದು, ಯಾವುದೇ ಕಾಮಗಾರಿಗೆ ಹಣದ ಕೊರತೆಯಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ನಗರದ ಮಹಾಲಕ್ಷ್ಮಿಲೇಔಟ್(ನಾಗಾಪುರ ವಾರ್ಡ್)ನಲ್ಲಿ ಸುಮಾರು 13.45 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣ ಹಾಗೂ ವಾರ್ಡ್ ನಂ.102ರ ವೃಷಭಾವತಿ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಯಾವುದೇ ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ, ಬಿಡಿಎ, ಜಲಮಂಡಳಿಗಳಿಗೆ ಮೂಲಕ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ. ಹೀಗಾಗಿ, ನಗರ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಅಡೆತಡೆ ಎದುರಾಗುವುದಿಲ್ಲ. ನಗರದಲ್ಲಿ ಮೇಲ್ಸೇತುವೆ, ಕೆಳ ಸೇತುವೆ, ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಪಕ್ಷಾತೀತವಾಗಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನಗರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಲೇ ಬಂದಿದೆ. ಈ ಸಂಬಂಧ ಪ್ರತಿ ಪಕ್ಷಗಳು ಟೀಕೆ ಮಾಡುತ್ತಲೇ ಇದ್ದಾರೆ. ನಾವು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಹೀಗಾಗಿ ನಮ್ಮದು ನುಡಿದಂತೆ ಡೆದ ಸರಕಾರ ಎಂದು ಹೇಳಿದರು.
ಕ್ರೀಡಾಂಗಣದಲ್ಲಿರುವ ವಿಶೇಷ ಸೌಲಭ್ಯಗಳು: ಕ್ರೀಡಾಂಗಣವನ್ನು 4.620 x 2245 ಚ.ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಕ್ರೀಡಾಂಗಣದ ಹವಾನಿಯಂತ್ರಣ ಸಭಾಂಗಣದಲ್ಲಿ 400 ಆಸನಗಳನ್ನು ಅಳವಡಿಸಲಾಗಿದೆ. ವೇದಿಕೆಗೆ ಲಿಕೋಸ್ಟಿಕ್ ತಂತ್ರಜ್ಞಾನದ ಅತ್ಯಾಧುನಿಕ ಶೈಲಿಯಲ್ಲಿ ವಿದ್ಯುತ್ ದೀಪಗಳನ್ನು ಹಾಕಲಾಗಿದ್ದು, ಲೈಟಿಂಗ್ ಅನ್ನು ಒಳಗೊಂಡಿರುತ್ತದೆ. 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಕಲ್ಪಿಸಲಾಗಿದೆ. ಇನ್ನು, ಕೆಳ ಹಂತದಲ್ಲಿ 280 ಆಸನಗಳು, ಬಾಲ್ಕನಿಯಲ್ಲಿ 120 ಆಸನಗಳನ್ನು ಅಳವಡಿಸಲಾಗಿದೆ.
ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್, ಮಲ್ಟಿ ಜಿಮ್, ಯೋಗಶಾಲೆಯನ್ನು ನಿರ್ಮಿಸಲಾಗಿದೆ. ಮೊದಲನೇ ಮಹಡಿಯಲ್ಲಿ ಹಿರಿಯರಿಗಾಗಿ ವ್ಯಾಯಾಮ ಶಾಲೆ. ಮತ್ತೊಂದು ಕೊಠಡಿಯಲ್ಲಿ ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮೇಯರ್ ಆರ್.ಸಂಪತ್‌ರಾಜ್, ಶಾಸಕ ಕೆ. ಗೋಪಾಲಯ್ಯ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಮಾಜಿ ಉಪಮೇಯರ್ ಎಸ್.ಟಿ. ಹೇಮಲತ, ಪಾಲಿಕೆ ಸದಸ್ಯ ಬಿ. ಭದ್ರೇಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಪ್ರಮುಖರಿದ್ದರು.