ಶ್ರೀದೇವಿ ಸಾವು : ದಾವೂದ್ ಹೆಸರೆತ್ತಿದ ಸ್ವಾಮಿಗೆ ಜನರಿಂದ ಮಂಗಳಾರತಿ

Update: 2018-02-27 10:51 GMT

ಹೊಸದಿಲ್ಲಿ ,ಫೆ.27:  ಹಿರಿಯ ನಟಿ ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರನ್ನು ಉಲ್ಲೇಖಿಸಿದ  ಹಿರಿಯ ಬಿಜೆಪಿ  ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿಗೆ ಟ್ವಿಟರಿಗರಿಂದ ಛೀಮಾರಿ ಮುಂದುವರಿದಿದೆ.

ಶ್ರೀದೇವಿ ಸಾವಿನ ಕುರಿತಂತೆ ಎದ್ದಿರುವ ಭಾರೀ ಊಹಾಪೋಹಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸ್ವಾಮಿ  “ಮಾಧ್ಯಮದಲ್ಲಿನ ವರದಿಗಳು ಸ್ಥಿರತೆಯಿಂದ ಕೂಡಿಲ್ಲವೆಂದೆನಿಸುತ್ತದೆ. ಆಕೆ ಹಾರ್ಡ್ ಲಿಕ್ಕರ್ ಸೇವಿಸುತ್ತಲೇ ಇರಲಿಲ್ಲ. ಹಾಗಿರುವಾಗ ಅದು ಅವಳ ದೇಹದೊಳಕ್ಕೆ ಹೇಗೆ ಸೇರಿಕೊಂಡಿತ್ತು ? ಸಿಸಿಟಿವಿ ದಾಖಲೆಗಳ ಬಗ್ಗೆ  ಏನು ಮಾಹಿತಿಯಿದೆ ? ಆರಂಭದಲ್ಲಿ ವೈದರು ಮಾಧ್ಯಮದ ಮುಂದೆ ಬಂದು ಆಕೆ ಹೃದಯಾಘಾತದಿಂದ ಸಾವಿಗೀಡಾದರೆಂದು ಹೇಗೆ ಹೇಳಿದರು ?'' ಎಂದು ಸುದ್ದಿ ಸಂಸ್ಥೆಯೊಂದರೊಡನೆ  ಮಾತನಾಡುತ್ತಾ  ಹೇಳಿದ್ದರು.

ನಟಿಯರು ಹಾಗೂ  ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡುವಿನ ಅಕ್ರಮ ಸಂಬಂಧಗಳ"" ಬಗ್ಗೆಯೂ  ಸ್ವಾಮಿ ಪ್ರಶ್ನಿಸಿದ್ದರು.  ಸಿನೆಮಾ ನಟಿಯರು ಹಾಗೂ ದಾವೂದ್ ನಡುವಿನ ಸಂಬಂಧವಿದೆಯಲ್ಲ, ಅದು ಅಕ್ರಮ ಈ ಬಗ್ಗೆ ಸ್ವಲ್ಪ ಗಮನ ನೀಡಬೇಕಿದೆ,'' ಎಂದಿದ್ದರು.

ಈ ಹೇಳಿಕೆಯಿಂದ ಸ್ವಾಮಿ ಟ್ವಿಟರಿಗರಿಂದ ಛೀಮಾರಿಗೊಳಗಾಗಿದ್ದಾರೆ-  ‘ಸರಣಿ ಚಾರಿತ್ರ್ಯ ಹರಣಕಾರ’, ‘ಭಾರತದ ಮುಖ್ಯ ಸಂಚು ಸಿದ್ಧಾಂತಕಾರ' ಎಂದೆಲ್ಲಾ ಹೆಸರುಗಳಿಂದ ಕೆಲವರು ಸ್ವಾಮಿಯನ್ನು ಜರಿದಿದ್ದಾರೆ.

ಒಬ್ಬರಂತೂ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್ ದಾಖಲಿಸಿ ಎಂದು ಸಲಹೆ ನೀಡಿದ್ದಾರಲ್ಲದೆ ಇನ್ನೊಬ್ಬರು "ಶ್ರೀದೇವಿಯ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ, ಅದಾಗಲೇ ಸ್ವಾಮಿ ಆಕೆ ಚಾರಿತ್ರ್ಯ ಹರಣದಲ್ಲಿ ತೊಡಗಿದ್ದಾರೆ.'' ಎಂದಿದ್ದರೆ, ಇನ್ನೊಬ್ಬರು  “ಸ್ವಾಮಿ ಸತ್ತು ಹೋದವರನ್ನೂ ಬಿಡುವುದಿಲ್ಲ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News