ಬೆಂಗಳೂರು: ಸದಾಶಿವ ವರದಿ ಶಿಫಾರಸ್ಸಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭ

Update: 2018-02-27 18:09 GMT

ಬೆಂಗಳೂರು, ಫೆ.27: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟದ ಸದಸ್ಯರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಮಂಗಳವಾರ ನಗರದ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೂ ಪಂಜಿನ ಮೆರವಣಿಗೆ ನಡೆಸಿದ ಒಕ್ಕೂಟದ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಾದಿಗ ಸಮುದಾಯ ಮುಖಂಡರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮಾದಿಗ ದಂಡೋರ ಸಂಸ್ಥಾಪಕ ಎಂ.ಶಂಕರಪ್ಪ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಕೇವಲ ಎಡ ಮತ್ತು ಬಲ ಸಮುದಾಯಗಳಿಗೆ ಸೀಮಿತವಾಗದೆ, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಶೋಷಿತ ಸಮುದಾಯಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀಡಿದ ವರದಿಯಾಗಿದೆ. ಹೀಗಾಗಿ, ವರದಿಯನ್ನು ಕೂಡಲೇ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಸಚಿವರ ಭೇಟಿ: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ, ವರದಿ ಶಿಫಾರಸ್ಸು ಮಾಡಲಾಗುವುದೆಂದು ಭರವಸೆ ನೀಡಿ ಹೋದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬಳಿ ಬರುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದೆಂದು ಮಾದಿಗ ಸಮುದಾಯದ ಮುಖಂಡರೊಬ್ಬರು ಹೇಳಿದರು.

ಪೊಲೀಸರ ದಬ್ಬಾಳಿಕೆ: ಆರೋಪ
ಮಾದಿಗ ಸಮುದಾಯದ ಪ್ರತಿಭಟನೆಯನ್ನ ನಿಲ್ಲಿಸಲು ಷ್ಯಡಂತ್ರ ನಡೆಸಲಾಗುತ್ತಿದ್ದು, ಇಲ್ಲಿನ ಪೊಲೀಸರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಕೈಬಿಡುವಂತೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟಗಾರರೊಬ್ಬರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News