ಈಗ ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ ನೋಟ್ ರದ್ದತಿಗಿಂತ ಮೊದಲಿನ ಮಟ್ಟಕ್ಕೆ!

Update: 2018-03-01 08:00 GMT

ಮುಂಬೈ, ಮಾ.1: ದೇಶದಲ್ಲಿ ಫೆಬ್ರವರಿ 23ರವರೆಗೆ ಒಟ್ಟು ಚಲಾವಣೆಯಲ್ಲಿರುವ ಕರೆನ್ಸಿ ಮೊತ್ತ 17,82 ಲಕ್ಷ ಕೋಟಿ ರೂ. ಆಗಿದ್ದು, ಇದು ನವೆಂಬರ್ 2016ರ ನೋಟು ಅಮಾನ್ಯೀಕರಣಕ್ಕಿಂತ ಮೊದಲು ಇದ್ದ ಮೊತ್ತದ ಶೇ 99.17 ಆಗಿದೆ. 

ನೋಟು ರದ್ದತಿಗಿಂತ ಮುಂಚೆ ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ ಪ್ರಮಾಣ 17.97 ಲಕ್ಷ ಕೋಟಿ ರೂ.ಗಳಷ್ಟಾಗಿತ್ತು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿ ತಿಳಿಸುತ್ತದೆ. ದೇಶ ನೋಟು ಅಮಾನ್ಯೀಕರಣಕ್ಕಿಂತ ಮುಂಚಿನ ಸ್ಥಿತಿಗೆ ಮರಳಲು 15 ತಿಂಗಳು  ತೆಗೆದುಕೊಂಡಿದೆ ಎಂದು ಇದರಿಂದ ತಿಳಿದು ಬರುತ್ತದೆ

ಸರಕಾರ ನೋಟು ಅಮಾನ್ಯೀಕರಣ ಘೋಷಿಸಿದ ನಂತರ ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿತ್ತು. ಡಿಸೆಂಬರ್ 30, 2014ರಲ್ಲಿದ್ದಂತೆ ಚಲಾವಣೆಯಲ್ಲಿದ್ದ ಹಣ 8.93 ಲಕ್ಷ ಕೋಟಿ ರೂ.ಗಳಾಗಿತ್ತು.

ಮುಂದಿನ ತಿಂಗಳುಗಳಲ್ಲಿ ಡಿಜಿಟಲ್ ವ್ಯವಹಾರಗಳು ಏರಿಕೆ ಕಂಡರೂ ಜನವರಿ 18ರಿಂದ ಮತ್ತೆ ನಗದು ಹಣ ಚಲಾವಣೆ 89,000 ಕೋಟಿ ರೂ.ಗಳಷ್ಟು ಹೆಚ್ಚಾಯಿತು ಎಂದೂ ತಿಳಿದು ಬಂದಿದೆ.

ನೋಟು ಅಮಾನ್ಯೀಕರಣದ ಕ್ರಮದಿಂದಾಗಿ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆತಿದೆ ಎಂದು ಸರಕಾರ ಹೇಳುತ್ತಿದೆಯಾದರೂ ಮತ್ತೆ ಸಾಕಷ್ಟು ನಗದು ಹಣವೇ ಚಲಾವಣೆಯಲ್ಲಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಅರ್ಥಶಾಸ್ತ್ರಜ್ಞರೂ ಯೋಚಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News