ಕಾಂಗ್ರೆಸ್ ಬೆಂಗಳೂರನ್ನು ಕ್ರೈಮ್ ಸಿಟಿಯನ್ನಾಗಿಸಿದೆ: ಪ್ರಕಾಶ್ ಜಾವಡೇಕರ್
ಬೆಂಗಳೂರು, ಮಾ.1: ಬಿಬಿಎಂಪಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಬೆಂಗಳೂರನ್ನು ಕ್ರೈಮ್ ಸಿಟಿ, ಗಾರ್ಬೆಜ್ ಸಿಟಿಯನ್ನಾಗಿ ಪರಿವರ್ತಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ದುರಾಡಳಿತದಿಂದಾಗಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಡ್ರಗ್ಸ್ ಮಾಫಿಯಾ ತಲೆ ಎತ್ತಿದ್ದು, ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಜನಪ್ರತಿನಿಧಿಗಳು ಹಾಗೂ ಅವರ ಮಕ್ಕಳು ಜನ ಸಾಮಾನ್ಯರ ಮೇಲೆ ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ವಹಿಸಲು ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ 24ಸಾವಿರ ರಸ್ತೆಗಳನ್ನು ಮುಚ್ಚಲು 4600ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಈ ಕ್ಷಣವು ಬೆಂಗಳೂರಿನ ರಸ್ತೆಗಳು ಸುರಕ್ಷತೆಯ ದೃಷ್ಟಿಯಿಂದ ಯಾವುದೆ ಬದಲಾವಣೆ ಆಗಿಲ್ಲವೆಂದು ಪ್ರಯಾಣಿಕರು ಆರೋಪಿಸುತ್ತಾರೆ. ಕೇವಲ ಹಣವನ್ನು ಲೂಟಿ ಮಾಡುವುದಕ್ಕಾಗಿ 4600ಕೋಟಿ ರೂ. ಮೀಸಲಿಡಲಾಗಿತ್ತು ಎಂದು ಅವರು ಆರೋಪಿಸಿದರು.
ನಗರದ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಕಾಂಗ್ರೆಸ್ ಒಂದು ಸಾವಿರ ಕೋಟಿ ರೂ. ಗೂ ಹೆಚ್ಚು ಹಣ ಚೆಲ್ಲಿದೆ. ಆದರೆ, ವಾಸ್ತವವಾಗಿ 100ಕೋಟಿ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಮುಗಿಸಬಹುದಾಗಿತ್ತು. ಇದರಲ್ಲೂ ಹಣ ಲೂಟಿ ಮಾಡುವ ಉದ್ದೇಶದಿಂದ ಸಣ್ಣ ಪ್ರಮಾಣದ ಕಾಮಗಾರಿಗಳಿಗೂ ಸಾವಿರಾರು ಕೋಟಿ ರೂ. ಹಣವನ್ನು ವಿನಿಯೋಗಿಸುತ್ತಿದೆ ಎಂದು ಅವರು ದೂಷಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 2018ರ ಹೊತ್ತಿಗೆ ಬೆಂಗಳೂರು ದೇಶದ ಪ್ರಥಮ ಸ್ಮಾರ್ಟ್ ಸಿಟಿ ಆಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅವರ ಹೇಳಿಕೆಗೆ ತದ್ವಿರುದ್ಧವಾಗಿ ಬೆಂಗಳೂರು ನಿರ್ಮಾಣಗೊಂಡಿದೆ. ಅನಿಯಮಿತ ವಿದ್ಯುತ್ ಸರಬರಾಜು, ಸಂಚಾರ ದಟ್ಟಣೆ, ಏರುತ್ತಲೆ ಇರುವ ಅಪರಾಧಗಳ ಸಂಖ್ಯೆ ಹೀಗೆ ಯಾವುದೆ ವಿಷಯದಲ್ಲೂ ಬೆಂಗಳೂರನ್ನು ದೇಶಕ್ಕೆ ಮಾದರಿಯನ್ನಾಗಿಸುವಲ್ಲಿ ಕಾಂಗ್ರೆಸ್ ವಿಲವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸುರೇಶ್‌ಕುಮಾರ್ ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅನುಪಯುಕ್ತ ಕಾರ್ಯಕ್ರಮಗಳಿಂದಾಗಿ ಬೆಂಗಳೂರು ಸಮಸ್ಯೆಗಳು ಬಗೆಹರಿಯದೆ, ಮತ್ತಷ್ಟು ಉಲ್ಬಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಬೆಂಗಳೂರನ್ನು ರಕ್ಷಿಸಿ ಎಂಬ ಪಾದಯಾತ್ರೆಯನ್ನು ಮಾ.2ರಿಂದ ಬಿಬಿಎಂಪಿ ವ್ಯಾಪ್ತಿಯ 198ವಾರ್ಡ್‌ಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ