ಮಾ.6ರಂದು ಉರ್ದು ಅಕಾಡಮಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಮಾ.1: ರಾಜ್ಯ ಉರ್ದು ಅಕಾಡಮಿಯ 2014. 2015 ಹಾಗೂ 2016ನೆ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.6ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ ಎಂದು ಉರ್ದು ಅಕಾಡಮಿ ಅಧ್ಯಕ್ಷ ಡಾ.ಸೈಯ್ಯದ್ ಖದೀರ್ ನಾಝಿಮ್ ಸರ್ಗಿರೊ ತಿಳಿಸಿದರು.
ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಉರ್ದು ಅಕಾಡಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಡಳಿತಾತ್ಮಕ ಕಾರಣಗಳಿಂದಾಗಿ 2014 ಹಾಗೂ 2015ನೆ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ. ನಮ್ಮ ನೂತನ ಸಮಿತಿಯು ಅಧಿಕಾರ ವಹಿಸಿಕೊಂಡ ಬಳಿಕ 2016ನೆ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲು ತೀರ್ಮಾನಿಸಿತು ಎಂದರು.
ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2014ರ ಡಿಸೆಂಬರ್ 6ರಂದು ಹೊರಡಿಸಿರುವ ಸುತ್ತೋಲೆಯನ್ವಯ ಪ್ರಶಸ್ತಿ ಜತೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನು ಹೆಚ್ಚಳ ಮಾಡಲಾಗಿದೆ ಎಂದು ಸೈಯ್ಯದ್ ಖದೀರ್ ಹೇಳಿದರು.
ರಾಜ್ಯ ಉರ್ದು ಅಕಾಡಮಿಗೆ 2018-19ನೆ ಸಾಲಿನ ಬಜೆಟ್‌ನಲ್ಲಿ 2.15 ಕೋಟಿ ರೂ.ಒದಗಿಸಲಾಗಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಹೆಚ್ಚಿನ ಅನುದಾನ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್‌ಸೇಠ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸ್ಥಳೀಯ ಶಾಸಕ ಆರ್.ವಿ.ದೇವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಪಿ.ಸಿ.ಮೋಹನ್, ಕೆ.ರಹ್ಮಾನ್‌ಖಾನ್, ಸಚಿವರಾದ ರೋಷನ್‌ಬೇಗ್, ಯು.ಟಿ.ಖಾದರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉರ್ದು ಅಕಾಡಮಿಯ ರಿಜಿಸ್ಟ್ರಾರ್ ಸಿರಾಜ್ ಅಹ್ಮದ್‌ಖಾಲಿದ್, ಸದಸ್ಯರಾದ ಮುಬೀನ್ ಮುನವ್ವರ್, ಆಬಿದ್ ಅಸ್ಲಂ ಉಪಸ್ಥಿತರಿದ್ದರು.