ದ್ವಿತೀಯ ಪಿಯುಸಿ ಪರೀಕ್ಷೆ : ಮೇಲ್ವಿಚಾರಕರ ಕಿತ್ತಾಟದಿಂದ 13 ವಿದ್ಯಾರ್ಥಿಗಳಿಗೆ ತಪ್ಪಿದ ಅವಕಾಶ
ಬೆಂಗಳೂರು, ಮಾ.1: ಫ್ರೇಜರ್‌ಟೌನ್ ಸಮೀಪದ ಕೋಲ್ಸ್‌ಪಾರ್ಕ್‌ನಲ್ಲಿರುವ ಗುಡ್‌ವಿಲ್ ಬಾಲಕಿಯರ ಪ್ರೌಢಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಿಗದಿ ಮಾಡಲಾಗಿದ್ದ ಪರೀಕ್ಷಾ ಕೇಂದ್ರದಲ್ಲಿ 13 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದ ಘಟನೆ ಗುರುವಾರ ಜರುಗಿದೆ.
ಜೆ.ಪಿ.ನಗರದಿಂದ ಕೋಲ್ಸ್‌ಪಾರ್ಕ್ ಸುಮಾರು 15 ಕಿ.ಮೀ.ದೂರವಿದೆ. ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕಾಲೇಜು ಆಡಳಿತ ಮಂಡಳಿ ವತಿಯಿಂದಲೆ ವಾಹನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅತಿಯಾದ ಸಂಚಾರ ದಟ್ಟಣೆಯ ಪರಿಣಾಮವಾಗಿ ವಿದ್ಯಾರ್ಥಿಗಳು 15 ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾರೆ.
ಈ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರೊಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆ ಕೈಗೊಳ್ಳಲು ಅನುಮತಿ ನೀಡಿ, ಪರೀಕ್ಷಾ ಪ್ರವೇಶ ಪತ್ರಕ್ಕೆ ಸಹಿಯನ್ನು ಹಾಕಿದ್ದಾರೆ. ಆದರೆ, ಇದಕ್ಕೆ ಮತ್ತೊಬ್ಬ ಮೇಲ್ವಿಚಾರಕರು ಆಕ್ಷೇಪ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ಕಾಲೇಜಿಗೆ ಪೊಲೀಸರನ್ನು ಕರೆಸಿ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದ ವಿದ್ಯಾರ್ಥಿಗಳನ್ನು ಹೊರಗಡೆಯೂ ಕಳುಹಿಸದೆ, ಕಾಲೇಜಿನ ಕಾಂಪೌಂಡ್ ಒಳಗಡೆಯೆ ಇರಿಸಿಕೊಂಡಿದ್ದಾರೆ. ಪರೀಕ್ಷಾ ಮೇಲ್ವಿಚಾರಕರ ಈ ಕ್ರಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು, ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಅಧಿಕಾರಿಗಳ ಕರ್ತವ್ಯಲೋಪದಿಂದ ಕಳೆದ ವರ್ಷ ಎರಡು ಬಾರಿ ರಸಾಯನ ಶಾಸ್ತ್ರದ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ವಿದ್ಯಾರ್ಥಿಗಳು ಎರೆಡೆರಡು ಬಾರಿ ರಸಾಯನಶಾಸ್ತ್ರ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿಯಿತ್ತು. ಸರಕಾರದ ಮಟ್ಟದಲ್ಲಿ ತಪ್ಪುಗಳಾದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ.
ಆದರೆ, ಇಲ್ಲಿ ಮಕ್ಕಳು 15 ನಿಮಿಷ ತಡವಾಗಿ ಬಂದರು ಎಂಬ ಕಾರಣಕ್ಕೆ ಅವರ ಭವಿಷ್ಯದ ಜತೆ ಚೆಲ್ಲಾಟವಾಡಲಾಗಿದೆ. ಅಧಿಕಾರಿಗಳು ಮಾನವೀಯತೆಯನ್ನು ಮರೆತವರಂತೆ ವರ್ತಿಸುತ್ತಿದ್ದಾರೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.