ಬಿಜೆಪಿ ವಿರುದ್ಧ ನಾವೂ ಚಾರ್ಜ್‌ಶೀಟ್ ಹಾಕುತ್ತೇವೆ : ರಾಮಲಿಂಗಾರೆಡ್ಡಿ
ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಬಿಜೆಪಿ ವಿರುದ್ಧ, ನಾವೂ ಚಾರ್ಜ್‌ಶೀಟ್ ಹಾಕುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾಳೆಯಿಂದ ಬೆಂಗಳೂರು ರಕ್ಷಿಸಿ ಎಂದು ಪಾದಯಾತ್ರೆ ಮಾಡಲಿ, ಅದಕ್ಕೆ ನಾಳೆಯೇ ನಾನು ಉತ್ತರ ಕೊಡುತ್ತೇನೆ ಎಂದರು.
ಬಿಬಿಎಂಪಿಯಲ್ಲಿ ಆಡಳಿತದಲ್ಲಿದ್ದ ಬಿಜೆಪಿಯವರು ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 8 ಸಾವಿರ ಕೋಟಿ ರೂ.ಸಾಲ ಬಿಟ್ಟು ಹೋಗಿದ್ದರು. ಅಲ್ಲದೆ, ಬಿಬಿಎಂಪಿಗೆ ಸೇರಿದ ಆರು ಕಟ್ಟಡಗಳನ್ನು ಅಡವಿಟ್ಟಿದ್ದರು. ಈ ಪೈಕಿ ನಾಲ್ಕು ಕಟ್ಟಡಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಬಿಡಿಸಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಬಿಬಿಎಂಪಿಯಲ್ಲಿ ಆರು ಸಾವಿರ ಕೋಟಿ ರೂ.ಅವ್ಯವಹಾರ ನಡೆದಿರುವ ಕುರಿತು ಕಠಾರಿಯಾ ವರದಿ ಬಯಲಿಗೆಳೆದಿದೆ. ಈ ವರದಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್‌ದಾಸ್ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.