ಪರಪ್ಪನ ಅಗ್ರಹಾರ ಅವ್ಯವಹಾರ ಪ್ರಕರಣ : ಸಿಐಡಿ ತನಿಖೆಗೆ ಆದೇಶ

Update: 2018-03-01 15:21 GMT

ಬೆಂಗಳೂರು, ಮಾ.1: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ರಾಜ್ಯ ಸರಕಾರ ಅಂಗೀಕರಿಸಿ, ಸಿಐಡಿ ತನಿಖೆಗೆ ಗುರುವಾರ ಆದೇಶಿಸಿದೆ.

ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಬಂಧಿಖಾನೆಯ ಡಿಐಜಿಯಾಗಿದ್ದ ಡಿ.ರೂಪಾ ನೀಡಿದ್ದ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ವಿನಯ್‌ಕುಮಾರ್ ನೇತೃತ್ವದಲ್ಲಿ ಮೂವರು ಹಿರಿಯ ಅಧಿಕಾರಿಗಳ ಸಮಿತಿಯೂ ಸಲ್ಲಿಸಿರುವ ವರದಿ ಅನ್ವಯ ಕಾರಾಗೃಹದ ಅಧೀಕ್ಷಕರಾಗಿದ್ದ ಕೃಷ್ಣಕುಮಾರ್, ಉಪ ಅಧೀಕ್ಷಕಿ ಎಚ್.ಅನಿತಾ ವಿರುದ್ಧ ತನಿಖೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಶಿಫಾರಸ್ಸಿನಲ್ಲಿ ಏನಿದೆ?: ಅವ್ಯವಹಾರ ಕುರಿತು ವರದಿ ನೀಡಿದ್ದ ರೂಪಾ ಹಾಗೂ ಆಗಿನ ಡಿಜಿ ಎಚ್.ಎಸ್.ಸತ್ಯನಾರಾಯಣ ಸರಕಾರಿ ನಿಯಮ ಉಲ್ಲಂಸಿದ್ದು ಎಂದು ಕಂಡು ಬಂದಿದ್ದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಂತರಿಕ ತನಿಖೆ ನಡೆಸಬಹುದು. ಕಾರಾಗೃಹದಲ್ಲಿ ಅಧಿಕಾರ ದುರುಪಯೋಗ ಕುರಿತು ತನಿಖೆ ನಡೆಸಬೇಕು. 2 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕುರಿತಂತೆ ಎಸಿಬಿ ತನಿಖೆ ನಡೆಸಬೇಕು.

ಸಿಸಿ ಟಿವಿ ಕ್ಯಾಮರ, ಮೊಬೈಲ್ ಜಾಮರ್‌ಗಳ ವಾರ್ಷಿಕ ನಿರ್ವಹಣೆ ಗುತ್ತಿಗೆಯನ್ನು ತಕ್ಷಣವೇ ಬೆಂಗಳೂರು ಸೇರಿದಂತೆ ಎಲ್ಲಾ ಜೈಲುಗಳಲ್ಲಿ ಜಾರಿಗೊಳಿಸಬೇಕು. ರಾಜ್ಯದ ಎಲ್ಲ ಜೈಲುಗಳಲ್ಲಿ ಮಾದರಿ ಕಾರಾಗೃಹ ಮಾರ್ಗದರ್ಶಿಯನ್ನು 3 ತಿಂಗಳಲ್ಲಿ ಜಾರಿಗೊಳಿಸಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.

ರೂಪಾ ಮೇಲೂ ತನಿಖೆ?
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಬಂಧಿಖಾನೆಯ ಡಿಐಜಿಯಾಗಿದ್ದ ರೂಪಾ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದರು. ಅಲ್ಲದೆ, ಮಾಧ್ಯಮಗಳಿಗೆ ವರದಿ ನೀಡಿರುವ ಆರೋಪ ಹಾಗೂ ಗೌಪ್ಯ ಕಾಯ್ದುಕೊಂಡಿಲ್ಲ ಎಂಬ ಆರೋಪ ಎದುರಾಗಿದ್ದು, ಸರಕಾರಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಇವರ ವಿರುದ್ಧ ತನಿಖೆ ಕೈಗೊಳ್ಳಬಹುದು ಎಂದು ಶಿಫಾರಸ್ಸಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News