ಮುಖ್ಯಮಂತ್ರಿ ವೇದಿಕೆಗೆ ಬಾರದಿದ್ದಕ್ಕೆ ಶಾಸಕ ಹಾರಿಸ್ ಹೇಳಿದ್ದೇನು ?
ಬೆಂಗಳೂರು, ಮಾ.1: ಸಮಾಜದಲ್ಲಿ ಕಾನೂನಿಗಿಂತ ದೊಡ್ಡವರಿಲ್ಲ. ಕಾನೂನಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕೆಂದು ಶಾಸಕ ಎನ್.ಎ.ಹಾರಿಸ್ ತಿಳಿಸಿದರು.
ಗುರುವಾರ ಶಾಂತಿನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚರ್ಚ್ ಸ್ಟ್ರೀಟ್ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆಗೆ ಬಾರದಿದ್ದಕ್ಕೆ ಸ್ಪಷ್ಟನೆ ನೀಡಿದ ಹಾರಿಸ್, ಮುಖ್ಯಮಂತ್ರಿಗಳು ತುರ್ತು ಕಾರ್ಯದ ನಿಮಿತ್ತ ಪಾವಗಡಕ್ಕೆ ತೆರಳಿದ್ದರಿಂದ ವೇದಿಕೆಗೆ ಆಗಮಿಸಲಿಲ್ಲ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದು ಸರಿಯಲ್ಲ ಎಂದರು.
ಯಾರೇ ತಪ್ಪು ಮಾಡಿದರು ಕಾನೂನಿನಡಿಯಲ್ಲಿ ಶಿಕ್ಷೆಯಾಗುತ್ತದೆ. ಹೀಗಾಗಿ, ಬೇರೊಬ್ಬರ ಮನಸ್ಸಿಗೆ ನೋವುಂಟು ಮಾಡಲು ರಾಜಕೀಯ ಮಾಡಬಾರದು. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಮುಹಮ್ಮದ್ ನಲಪಾಡ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಭಿವೃದ್ಧಿ ಬಗ್ಗೆ ಮಾತ್ರ ಕೇಳಿ. ಬೇರೆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.