ತಜ್ಞರ ಸಮಿತಿ ವರದಿ ನೀಡಿದರೆ ಸಾಮಾಜಿಕ ಕ್ರಾಂತಿಯಾಗುವ ಸಂಭವ : ಹೈಕೋರ್ಟ್‌ಗೆ ಪಿಐಎಲ್
ಬೆಂಗಳೂರು, ಮಾ.1: ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ತಜ್ಞರ ಸಮಿತಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತನ್ನ ವರದಿ ನೀಡುವ ಸಾಧ್ಯತೆ ಇದ್ದು ಸಮಿತಿಯ ಕಾರ್ಯ ನಿರ್ವಹಣೆಗೆ ತಡೆ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದರು.
ಈ ಕುರಿತಂತೆ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಶಶಿಧರ ಶ್ಯಾನುಭೋಗ ಪರ ವಕೀಲ ಜಿ.ಆರ್.ಗುರುಮಠ ಈ ಕುರಿತಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗಾಗಲೇ ಇದೇ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದ್ದು, ತಜ್ಞರ ಸಮಿತಿ ಏನೇ ವರದಿ ಕೊಟ್ಟರೂ ಅದು ಈ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರತಕ್ಕದ್ದು ಎಂದು ಆದೇಶಿಸಿದೆಯಲ್ಲಾ ಎಂದು ಹೇಳಿತು.
ಇದಕ್ಕೆ ಗುರುಮಠ, ಸ್ವಾಮಿ, ತಜ್ಞರ ಸಮಿತಿ ವರದಿ ನೀಡಿದರೆ ಸಾಮಾಜಿಕ ಕ್ರಾಂತಿ ಆಗುವ ಸಂಭವವಿದೆ. ಇದೊಂದು ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಇದರ ಹಿಂದೆ ನಾಲ್ವರು ಮಂತ್ರಿಗಳು ಇದ್ದಾರೆ ಎಂದರು.
ಈ ಮಾತಿಗೆ ನ್ಯಾಯಮೂರ್ತಿ ಮಾಹೇಶ್ವರಿ, ಯಾರೇ ಇದ್ದರೂ ಅವರು ಕಾನೂನು ಪರಿಧಿಯಲ್ಲೇ ನಡೆಯಬೇಕಲ್ಲವೆ, ಅವರೇನೂ ಎಲ್ಲೂ ಹೋಗುವುದಿಲ್ಲ. ಕಾನೂನು ಸುಪರ್ದಿಯಲ್ಲೇ ಇರುತ್ತಾರಲ್ಲಾ ಏಕೆ ಚಿಂತಿಸುತ್ತೀರಿ ಎಂದರು.
2017ರ ಡಿಸೆಂಬರ್ 22ರಂದು ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶಿಸಿರುವ ಕ್ರಮವನ್ನು ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಶಶಿಧರ ಶ್ಯಾನುಭೋಗ ಪ್ರಶ್ನಿಸಿದ್ದರೆ, ವೀರಶೈವ ಹಾಗೂ ಲಿಂಗಾಯತ ಎರಡೂ ಹಿಂದೂ ಧರ್ಮದ ಭಾಗ. ಇದು ವಿಭಜನೆ ಆಗಲು ಬಿಡಬಾರದು ಎಂದು ಪ್ರತಿಪಾದಿಸಿ ವೀರಶೈವ ಬಣದ ಮುಖಂಡ ಬಿ.ಎಸ್.ನಟರಾಜ್ ಹಾಗೂ ಸತೀಶ್ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದಾರೆ.
ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿದೆ.