‘ಕಾಂಗ್ರೆಸ್ ಅಂದರೆ ವಿನಾಶ, ಬಿಜೆಪಿ ಅಂದರೆ ವಿಕಾಸ’
ಬೆಂಗಳೂರು, ಮಾ. 2: ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರಿಗೆ ಕಳಂಕ ಬಂದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ‘ಬೆಂಗಳೂರು ಉಳಿಸಿ’ ಘೋಷಣೆಯಡಿ ಪಾದಯಾತ್ರೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಿಂದ ಪಾದಯಾತ್ರೆಗೆ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದರು. ಇಂದಿನಿಂದ ಹದಿನಾಲ್ಕು ದಿನಗಳ ಕಾಲ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಕುಮಾರ್, ‘ಕಾಂಗ್ರೆಸ್ ಅಂದರೆ ವಿನಾಶ, ಬಿಜೆಪಿ ಅಂದರೆ ವಿಕಾಸ. ಸಿದ್ದರಾಮಯ್ಯ ಅಂದರೆ ಮರಳು, ಗೂಂಡಾ ಮಾಫಿಯಾಕ್ಕೆ ಮತ್ತೊಂದು ಹೆಸರು. ಸಿದ್ದರಾಮಯ್ಯ ಸದಾ ಸಿದ್ಧ, ಕೂತಲ್ಲೇ ನಿದ್ದೆ, ನಿಂತಲ್ಲೇ ಬಿದ್ದೆ.. ಸಿದ್ದ ಬಿದ್ದ..’ ಎಂದು ಏಕವಚನದಲ್ಲೆ ಲೇವಡಿ ಮಾಡಿದರು.
ಕರ್ನಾಟಕ ರಾಜ್ಯಕ್ಕೆ ಮಾಫಿಯಾ ಸರಕಾರ ಬೇಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಫಿಯಾ-ಗೂಂಡಾ ಸರಕಾರ. ಶಾಂತಿಪ್ರಿಯ ಬೆಂಗಳೂರು ನಗರದ ಜನರಿಗೆ ಬೇಕಾಗಿರುವುದು ಗೂಂಡಾಗಿರಿಯಲ್ಲ, ಮೋದಿಗಿರಿ ಎಂದು ಅನಂತಕುಮಾರ್ ಇದೇ ವೇಳೆ ಪ್ರತಿಪಾದಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೆಂಗಳೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಸಂಚರಿಸುವುದೇ ಕಷ್ಟವಾಗಿದೆ. ಸಿಲಿಕಾನ್ ಸಿಟಿಯನ್ನು ಕಾಂಗ್ರೆಸ್ ಸರಕಾರ ಕ್ರೈಂ ಸಿಟಿಯನ್ನಾಗಿ ಮಾಡಿದೆ ಎಂದು ಬಿಜೆಪಿ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ವಾಗ್ದಾಳಿ ನಡೆಸಿದರು.
‘ಉದ್ಯಾನನಗರಿ ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ, ಕ್ರೈಂ ಸಿಟಿ ಆಗುವಂತೆ ಮಾಡಿದ್ದು ಕಾಂಗ್ರೆಸ್. ಈ ಹಣೆಪಟ್ಟ ತಪ್ಪಬೇಕಾದರೆ ಮುಂಬರುವ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಆಯ್ಕೆಯಾಗಬೇಕು’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕರೆ ನೀಡಿದರು.
ಸಚಿವರ ಪಾದಯಾತ್ರೆ: ಗವಿ ಗಂಗಾಧರೇಶ್ವರ ದೇಗುಲದಿಂದ ಆರಂಭದಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಇಂದು ಬಸವನಗುಡಿ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜತೆಗೆ ಕೇಂದ್ರ ಸಚಿವರುಗಳಾದ ಅನಂತಕುಮಾರ್, ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಬೆಂಗಳೂರು ನಗರದ ಬಿಜೆಪಿ ಶಾಸಕರಾದ ವಿಜಯಕುಮಾರ್, ರವಿಸುಬ್ರಹ್ಮಣ್ಯ, ಡಾ. ಅಶ್ವತ್ಥ್ ನಾರಾಯಣ, ಸುರೇಶ್‌ಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕರಪತ್ರ ಹಂಚಿಕೆ: ಈ ಪಾದಯಾತ್ರೆ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಅನಂತಕುಮಾರ್, ಸದಾನಂದಗೌಡ ರಸ್ತೆ ಬದಿ ನಿಂತಿದ್ದ ನಾಗರಿಕರಿಗೆ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ವರದಿಯ ಸಾರಾಂಶವನ್ನೊಳಗೊಂಡ ಕರಪತ್ರವನ್ನು ಹಂಚಿದರು.
ಶಾಂತಿನಗರ ಕ್ಷೇತ್ರದಲ್ಲಿ ಯಾತ್ರೆ: ಸಂಸದ ಪಿ.ಸಿ.ಮೋಹನ್, ಶಾಸಕ ಆರ್. ಅಶೋಕ್ ನೇತೃತ್ವದಲ್ಲಿ ಇಲ್ಲಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಯುಬಿ ಸಿಟಿಯಿಂದ ಆರಂಭಗೊಂಡ ಯಾತ್ರೆ ವಿಠ್ಠಲ್ ಮಲ್ಯ ರಸ್ತೆ ಮೂಲಕ ಶಾಂತಿನಗರದ ವಿವಿಧೆಡೆಗಳಲ್ಲಿ ಪಾದಯಾತ್ರೆ ನಡೆಯಿತು.