×
Ad

‘ಉಪ್ಪಾರ ಸಮಾಜ’ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ

Update: 2018-03-02 18:54 IST

ಬೆಂಗಳೂರು, ಮಾ.2: ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶುಕ್ರವಾರ ನಗರದ ಅರಮನೆ ಮೈದಾನದ ಟೆನ್ನಿಸ್ ಪೆವಿಲಿಯನ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೆಸ್ತರು ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸುವಂತೆ 1997-98ರಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. 20 ವರ್ಷವಾದರೂ ಇನ್ನು ಯಾವುದೇ ತೀರ್ಮಾನವಾಗಿಲ್ಲ. ಅದೇ ರೀತಿ ನಾಯಕರಲ್ಲಿರುವ ‘ಪರಿವಾರ’ದವರನ್ನು ಎಸ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿ ಎಷ್ಟೋ ವರ್ಷವಾಗಿದೆ ಎಂದು ಅವರು ಹೇಳಿದರು.

2017-18ನೆ ಸಾಲಿನ ಬಜೆಟ್‌ನಲ್ಲಿ ಉಪ್ಪಾರ ಸಮುದಾಯದವರಿಗೆ ಪ್ರತ್ಯೇಕವಾದ ಅಭಿವೃದ್ಧಿ ನಿಗಮ ರಚಿಸುವುದಾಗಿ ಘೋಷಣೆ ಮಾಡಿದ್ದೆ. ಇವತ್ತು ಉಪ್ಪಾರ ಜನಾಂಗ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಲೋಕಾರ್ಪಣೆಯಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ವಿಶ್ವಕರ್ಮ, ಅಂಬಿಗರ ಚೌಡಯ್ಯ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮಗಳನ್ನು ರಚನೆ ವಾಡಿದ್ದೇವೆ ಎಂದು ಅವರು ತಿಳಿಸಿದರು.

ಸವಿತಾ ಸಮಾಜ, ಗೊಲ್ಲ ಸಮಾಜ, ತಿಗಳ ಸಮಾಜ ಹಾಗೂ ಮಡಿವಾಳ ಸಮಾಜದವರಿಗೂ ಪ್ರತ್ಯೇಕ ನಿಗಮ ರಚಿಸುವ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಈ ನಾಲ್ಕು ಜಾತಿಗಳಿಗೆ 100 ಕೋಟಿ ರೂ.ವಿಶೇಷ ಅನುದಾನ ನೀಡಿದ್ದೇವೆ ಎಂದು ಅವರು ತಿಳಿಸಿದರು.

ನಿಮ್ಮೆಲ್ಲರ ಆಶೀರ್ವಾದದಿಂದ ಐದು ವರ್ಷ ಪೂರೈಸಿದ್ದೇನೆ. ಪುನಃ ನಾವೇ ಅಧಿಕಾರಕ್ಕೆ ಬರಬೇಕಾದರೆ ನಿಮ್ಮ ಆಶೀರ್ವಾದ ಅಗತ್ಯ. ಉಪ್ಪಾರ ಸಮಾಜದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗೆ ಎಷ್ಟು ನಮಸ್ಕಾರ ಹೇಳಿದರೂ ಕಡಿಮೆಯೆ, ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದರು. ಅದನ್ನು ಮರೆಯಲು ಸಾಧ್ಯವೇ ಎಂದು ಅವರು ತಿಳಿಸಿದರು.

ಭಗೀರಥ ಜಯಂತಿಯನ್ನು ಆಚರಿಸಿದ್ದು ಯಾರು? ಉಪ್ಪಾರ ಜನಾಂಗ ಅಭಿವೃದ್ಧಿ ನಿಗಮ ಮಾಡಿದವರು ಯಾರು? ಪುಟ್ಟರಂಗ ಶೆಟ್ಟಿಯನ್ನು ಶಾಸಕರನ್ನಾಗಿ ಮಾಡಿದ್ದು ಯಾರು? ಮುಂದೆ ಅವರನ್ನು ಸಚಿವರನ್ನಾಗಿ ಮಾಡುವುದು ಯಾರು? ಸಭಿಕರಿಗೆ ಪ್ರಶ್ನೆಗಳ ಸುರಿಮಳೆಗೈದ ಮುಖ್ಯಮಂತ್ರಿ, ಅವರಿಂದ ‘ನೀವು’ ಎಂಬ ಉತ್ತರವನ್ನು ಪಡೆದುಕೊಂಡರು.

ನಿಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ. ಹಿಂದುಳಿದ ವರ್ಗದಿಂದ ವಿಮೋಚನೆ ಪಡೆಯಲು ಶಿಕ್ಷಣವೇ ಪ್ರಬಲ ಅಸ್ತ್ರ. ವಿದ್ಯಾವಂತರಾದರೆ ಮಾತ್ರ, ಆರ್ಥಿಕವಾಗಿ ಸಬಲರಾಗಲುಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ನಮ್ಮ ಸಮಾಜದವರನ್ನು ಉಪಕುಲಪತಿ, ನನಗೆ ಸಂಸದೀಯ ಕಾರ್ಯದರ್ಶಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಜಕ್ಕಪ್ಪ ಯಡವಿಯನ್ನು ಭೀಮ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ, ಲಿಂಗಪ್ಪರನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಹಾಗೂ ಮತ್ತೊಬ್ಬರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಎರಡು ಎಕರೆ 20 ಗುಂಟೆ ಜಮೀನು ನೀಡಿದ್ದಾರೆ. ಇವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ, ಶಕ್ತಿಯಿಲ್ಲದವರಿಗೆ ಶಕ್ತಿ ನೀಡಿದ ಸಿದ್ದರಾಮಯ್ಯನವರು ಮತ್ತೊಮ್ಮೆ ಏನಾಗಬೇಕು ಎಂದು ಕೇಳಿದಾಗ ಸಭಿಕರು ‘ಮುಖ್ಯಮಂತ್ರಿಯಾಗಬೇಕು’ ಎಂದರು. ಯಾರಿಗಾಗಿ ಆಗಬೇಕು ಎಂದು ಕೇಳಿದಾಗ ‘ನಮಗಾಗಿ’ ಎಂದು ಜಯಘೋಷಗಳನ್ನು ಮೊಳಗಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಹೊಸದುರ್ಗದ ಮದುರೆಯ ಶ್ರೀ ಪುರುಷೋತ್ತಮಾನಂದ ಸ್ವಾಮಿ ವಹಿಸಿದ್ದರು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಡಾ.ಎನ್.ವಿ.ಪ್ರಸಾದ್, ಚಾಮರಾಜನಗರ ಜಿ.ಪಂ. ಉಪಾಧ್ಯಕ್ಷ ಯೋಗೇಶ್, ರಾಯಚೂರು ಜಿಲ್ಲಾ ಉಪ್ಪಾರ ಮಹಿಳಾ ಮಂಡಳಿ ಅಧ್ಯಕ್ಷೆ ಪಿ.ಸುರೇಖಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News